ವಾಷಿಂಗ್ಟನ್(ಅಮೆರಿಕ): ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬುಧವಾರ ಅಮೆರಿಕಕ್ಕೆ ಭೇಟಿ ನೀಡಿದ್ದು, ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ, ಕ್ವಾಡ್ ಶೃಂಗಸಭೆ ಮತ್ತು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಅಮೆರಿಕದ ಜನರಲ್ ಅಸೆಂಬ್ಲಿಯ 76 ನೇ ಅಧಿವೇಶನದಲ್ಲಿಯೂ ನಮೋ ಭಾಗವಹಿಸಿ ಮಾತನಾಡಲಿದ್ದಾರೆ.
ಆಂಡ್ರೂಸ್ ಜಂಟಿ ಏರ್‌ಫೋರ್ಸ್ ಬೇಸ್ನಲ್ಲಿ ಪ್ರಧಾನಿ ಮೋದಿ ಅವರನ್ನು ಬೈಡನ್ ಆಡಳಿತದ ಹಿರಿಯ ಅಧಿಕಾರಿಗಳು ಮತ್ತು ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಸ್ವಾಗತಿಸಿದರು. ಈ ವೇಳೆ ಭಾರಿ ಮಳೆ ಸುರಿಯುತ್ತಿದ್ದರೂ, ಮೋದಿಯನ್ನು ಸ್ವಾಗತಿಸಲು ಭಾರತೀಯ ಅಮೆರಿಕನ್ನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲರತ್ತ ಕೈ ಬೀಸಿ, ಭಾರತೀಯರ ಕೈ ಕುಲುಕಿ ನಮೋ ಮುಂದೆ ಸಾಗಿದರು.
2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಏಳನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಭಾರತ - ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಜಪಾನ್ - ಆಸ್ಟ್ರೇಲಿಯಾದೊಂದಿಗಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಎಂದು ಮೋದಿ ಹೇಳಿದ್ದಾರೆ.
ಸೆಪ್ಟೆಂಬರ್ 24 ರಂದು ಮೋದಿ-ಬೈಡನ್ ಅವರ ಮೊದಲ ದ್ವಿಪಕ್ಷೀಯ ಸಭೆ ಶ್ವೇತಭವನದಲ್ಲಿ ನಡೆಯಲಿದೆ. ಬಳಿಕ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಮತ್ತು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಹಾಗೂ ಮೋದಿ, ಬೈಡನ್ ಸಮ್ಮುಖದಲ್ಲಿ ಕ್ವಾಡ್ ನಾಯಕರ ಶೃಂಗಸಭೆ ಶ್ವೇತಭವನದಲ್ಲಿ ನಡೆಯಲಿದೆ.
ಇದನ್ನೂ ಓದಿ: ಇಂದಿನಿಂದ ಮೂರು ದಿನ ಮೋದಿ ಅಮೆರಿಕ ಪ್ರವಾಸ.. ದೆಹಲಿಯಿಂದ ವಿಮಾನವೇರಿದ ಪ್ರಧಾನಿ
2021 ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾದ ಬಳಿಕ ಬೈಡನ್ ಹಾಗೂ ಪ್ರಧಾನಿ ಮೋದಿ ಅನೇಕ ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಏಪ್ರಿಲ್ 26 ರಂದು ಅವರು ಕೊನೆ ಬಾರಿ ದೂರವಾಣಿ ಸಂಭಾಷಣೆ ನಡೆಸಿದ್ದರು.
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಂದು ಪ್ರಧಾನಿ ಮೋದಿ ಜತೆ ಮಾತನಾಡಲಿದ್ದಾರೆ. ಈ ಹಿಂದೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೂರವಾಣಿ ಮೂಲಕ ಉಭಯ ನಾಯಕರು ಮಾತನಾಡಿದ್ರು.
ನನ್ನ ಭೇಟಿಯ ಸಮಯದಲ್ಲಿ, ಬೈಡನ್ರೊಂದಿಗೆ ಭಾರತ- ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಪರಿಶೀಲಿಸುತ್ತೇನೆ. ಪರಸ್ಪರ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಅಮೆರಿಕಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಹೇಳಿದ್ದರು.