ಒಟ್ಟಾವಾ (ಕೆನಡಾ) : ನೂರಾರು ಪ್ರಯಾಣಿಕರು ಕೊರೊನಾ ವೈರಸ್ಗೆ ತುತ್ತಾದ ಹಿನ್ನೆಲೆ ನಿರ್ಬಂಧಿಸಲ್ಪಟ್ಟಿರುವ ಜಪಾನ್ನ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿದ್ದ 200ಕ್ಕೂ ಹೆಚ್ಚು ಕೆನಡಿಯರನ್ನು ಅಲ್ಲಿನ ಸರ್ಕಾರ ಸ್ಥಳಾಂತರಿಸಿದೆ.
ಇನ್ನೂರು ಕೆನಡಿಯನ್ ಪ್ರಜೆಗಳನ್ನು ಹೊತ್ತ ಚಾರ್ಟಡ್ ಹೆಸರಿನ ವಿಮಾನವು ಶುಕ್ರವಾರ ಒಟ್ಟಾವಾ ನಗರದ 120 ಮೈಲೀ ದೂರದದಲ್ಲಿರುವ ಕೆನಡಾ ಸೇನಾ ನೆಲೆಯಲ್ಲಿ ಬಂದಿಳಿದಿದೆ. ಎಲ್ಲ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದ್ದು, ಮುಂದಿನ 14 ದಿನಗಳ ಕಾಲಾ ಒಂಟಾರಿಯೋದ ಕಾರ್ನ್‌ವಾಲ್‌ನಲ್ಲಿರುವ ನವ್ ಸೆಂಟರ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳವನ್ನು ಈ ಹಿಂದೆ ಸರ್ಕಾರವು ತುರ್ತು ಆಶ್ರಯ ಕೇಂದ್ರವಾಗಿ ಬಳಸಿಕೊಂಡಿತ್ತು.
ಜಪಾನ್ನ ಟೋಕಿಯೊ ಬಳಿಯ ಯೋಕೋಹಾಮಾದಲ್ಲಿ ಲಂಗರು ಹಾಕಿರುವ ಡೈಮಂಡ್ ಪ್ರಿನ್ಸೆಸ್ ಹೆಸರಿನ ಬೃಹತ್ ಹಡಗು, ಚೀನಾದ ಬಳಿಕ ಅತೀ ದೊಡ್ಡ ಕೊರೊನಾ ವೈರಸ್ ಕ್ಲಸ್ಟರ್ ಆಗಿ ಮಾರ್ಪಟ್ಟಿದೆ. ಈ ಹಡಗಿನ ಒಟ್ಟು 3,700 ಪ್ರಯಾಣಿಕರು ಮತ್ತು ಸಿಬ್ಬಂದಿಗಳಿದ್ದು, ಇದರಲ್ಲಿ 600 ಜನಕ್ಕೆ ಕೊರೊನಾ ಬಾಧಿಸಿರುವುದು ದೃಢಪಟ್ಟಿದೆ. ಹೀಗಾಗಿ ಹಡಗಿಗೆ ನಿರ್ಬಂಧ ಹೇರಲಾಗಿದೆ. ಈ ಹಡಗಿನಲ್ಲೇ ಕನ್ನಡಿಗ ಸೇರಿದಂತೆ ಹಲವು ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದಾರೆ.