ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಚುನಾಯಿತ ಸರ್ಕಾರವನ್ನು ಬದಲಿಸಿದ ತಾಲಿಬಾನ್ಗೆ ಬೆಂಬಲಿಸಿದೆ ಮತ್ತು ಪೋಷಿಸಿದೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್ನಲ್ಲಿ ಅವರು ಮಾತನಾಡುತ್ತಾ, ಪಾಕಿಸ್ತಾನವು ಆಫ್ಘನ್ನ ನೆರೆಯ ರಾಷ್ಟ್ರವಾಗಿದೆ. ಅಫ್ಘಾನಿಸ್ತಾನದಲ್ಲಿರುವ ಚುನಾಯಿತ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಲು, ಉಗ್ರಪಡೆ ಸರ್ಕಾರ ರಚಿಸಲು ಪಾಕಿಸ್ತಾನ ನೆರವಾಗಿದೆ. ಎರಡು ದಶಕಗಳಿಂದ ಭಯೋತ್ಪಾಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಪಾಕ್, ಆಫ್ಘನ್ನಲ್ಲಿ ತಾಲಿಬಾನ್ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.
ಆಫ್ಘನ್ನ ಪ್ರಸ್ತುತ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಶೃಂಗ್ಲಾ, ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರು ನಿಷ್ಕ್ರಿಯವಾಗಿಲ್ಲ. ಆಫ್ಘನ್ ಬಗ್ಗೆ ಕಾಳಜಿ ಹೊಂದಿರುವ ಪ್ರತಿ ರಾಷ್ಟ್ರದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪಾಕ್ ರಾಯಭಾರಿ ಭೇಟಿ ಮಾಡಿದ Taliban.. ಈ ವಿಚಾರಗಳ ಕುರಿತಂತೆ ಚರ್ಚೆ
ಆಲ್ಖೈದಾ ಉಗ್ರ ಸಂಘಟನೆಯು ಆಫ್ಘನ್ - ಪಾಕ್ ಗಡಿ ಪ್ರದೇಶದಲ್ಲಿ ಬೀಡುಬಿಟ್ಟಿದೆ ಎಂದು ವಿಶ್ವಸಂಸ್ಥೆಯ ಪರಿಶೀಲನಾ ವರದಿ ಹೇಳಿದೆ. ಅಲ್ಲದೇ, ISIL-K, ಆಲ್ಖೈದಾ ಸೇರಿದಂತೆ ಬಹುತೇಕ ಉಗ್ರಪಡೆಗಳು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿದ್ದಾರೆ. ಈ ಸಂಘಟನೆಗಳ ನಾಯಕರು ಮತ್ತು ತಾಲಿಬಾನ್ಗಳು ಪಾಕ್ನಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.