ನ್ಯೂಯಾರ್ಕ್: ಕರ್ತವ್ಯದಲ್ಲಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ನ್ಯೂಯಾರ್ಕ್‌ನ ಪೊಲೀಸ್ ಅಧಿಕಾರಿಯನ್ನು ಒಂದು ತಿಂಗಳು ವೇತನರಹಿತವಾಗಿ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ದಾರಿಯಲ್ಲಿ ಓರ್ವ ವ್ಯಕ್ತಿಯ ಜತೆ ಸಂಭಾಷಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ಪದೆ ಪದೇ 'ಟ್ರಂಪ್ 2020' ಎಂದು ಹೇಳಿದರು. ಅಲ್ಲದೇ ಇಲಾಖೆಯ ವಾಹ ಹಾಗೂ ಧ್ವನಿವರ್ಧಕವನ್ನು ಸಹ ಟ್ರಂಪ್ ಪರ ಪ್ರಚಾರಕ್ಕೆ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ತವ್ಯದಲ್ಲಿರುವಾಗ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಅಧಿಕಾರಿಗಳಿಗೆ ಅವಕಾಶವಿಲ್ಲ ಎಂದು ವಕ್ತಾರರು ವಿವರಿಸಿದ್ದಾರೆ.
ಸದ್ಯ ಅವರನ್ನು 30 ದಿನಗಳವರೆಗೆ ವೇತನರಹಿತ ಅಮಾನತುಗೊಳಿಸಿ ಆದೇಶಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ವಕ್ತಾರ ಹೇಳಿದ್ದಾರೆ.
ರಾಜಕೀಯ ಉದ್ದೇಶಗಳಿಗಾಗಿ ಇಲಾಖೆಯ ವಾಹನದ ಧ್ವನಿವರ್ಧಕವನ್ನು ಬಳಸಿದ್ದಕ್ಕಾಗಿ ಅವರನ್ನು ಅಮಾನತು ಮಾಡಿಲಾಗಿದೆ. ಕರ್ತವ್ಯದಲ್ಲಿರುವಾಗ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಧಿಕಾರಿಗಳಿಗೆ ಅವಕಾಶವಿಲ್ಲ ಎಂದು ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡಿ ಬ್ಲಾಸಿಯೊ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಕರ್ತವ್ಯದಲ್ಲಿರುವಾಗ ಅಥವಾ ಸಮವಸ್ತ್ರದಲ್ಲಿರುವಾಗ ಕಾನೂನು ಜಾರಿ ಅಧಿಕಾರಿಗಳು ವೈಯಕ್ತಿಕ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು NYPD ಪೆಟ್ರೋಲ್ ಗೈಡ್ ನಿಷೇಧಿಸುತ್ತದೆ.