ವಾಷಿಂಗ್ಟನ್ : ಕೋವಿಡ್ ವಿರುದ್ಧದ ಹೋರಾಟದಲ್ಲಿ ನೊವಾವಾಕ್ಸ್ ಲಸಿಕೆ ಶೇ.90ರಷ್ಟು ಪರಿಣಾಮಕಾರಿಯಾಗಿದೆ ಮತ್ತು ಎಲ್ಲಾ ರೀತಿಯ ವೈರಸ್ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಕಂಪನಿ ಹೇಳಿದೆ. ಯುಎಸ್ ಮತ್ತು ಮೆಕ್ಸಿಕೋದಲ್ಲಿ ನಡೆಸಿದ ಅಂತಿಮ ಹಂತದ ಅಧ್ಯಯನದಲ್ಲಿ ಲಸಿಕೆ ಪರಿಣಾಮಕಾರಿ ಜತೆಗೆ ಸುರಕ್ಷಿತವಾಗಿದೆ ಎಂದು ಕಂಪನಿ ತಿಳಿಸಿದೆ.
ನೊವಾವಾಕ್ಸ್ ಸಂಗ್ರಹ ಸುಲಭ
ಯುಎಸ್ನಲ್ಲಿ ಕೋವಿಡ್ ವಿರುದ್ಧದ ಲಸಿಕೆ ಬೇಡಿಕೆ ಕಡಿಮೆಯಾಗಿದ್ದರೂ, ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ವ್ಯಾಕ್ಸಿನ್ ಅವಶ್ಯಕತೆಯಿದೆ. ಅಲ್ಲದೆ, ಈ ಲಸಿಕೆ ಸಂಗ್ರಹಿಸಲು ಮತ್ತು ಸಾಗಿಸಲು ಸುಲಭವಾಗಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಲಸಿಕೆ ಪೂರೈಕೆಗೆ ಇದು ಸಹಕಾರಿಯಾಗಲಿದೆ. ಕಂಪನಿಯು ಒಂದು ತಿಂಗಳಲ್ಲಿ 100 ಮಿಲಿಯನ್ ಡೋಸ್ಗಳನ್ನು ಉತ್ಪಾದಿಸುವ ಭರವಸೆ ನೀಡಿದೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಯುಎಸ್, ಯುರೋಪ್ ಮತ್ತು ಇತರೆಡೆಗಳಲ್ಲಿ ಲಸಿಕೆ ಬಳಕೆಗೆ ಅನುಮೋದನೆ ಪಡೆಯಲು ಯೋಜಿಸಲಾಗಿದೆ. ಆ ವೇಳೆಗೆ ತಿಂಗಳಿಗೆ 100 ಮಿಲಿಯನ್ ಡೋಸ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ನೊವಾವಾಕ್ಸ್ ಮುಖ್ಯ ಕಾರ್ಯನಿರ್ವಾಹಕ ಸ್ಟಾನ್ಲಿ ಎರ್ಕ್ ತಿಳಿಸಿದ್ದಾರೆ. ಮೊದಲಿಗೆ ಲಸಿಕೆಗಳನ್ನು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಕಳಿಸಲಾಗುವುದು ಎಂದು ಅವರು ಹೇಳಿದರು.
‘ಯುಎಸ್ನ ಅರ್ಧದಷ್ಟು ಜನರಿಗೆ ಒಂದೇ ಡೋಸ್ ಲಸಿಕೆ’
'ಅವರ್ ವರ್ಲ್ಡ್ ಇನ್ ಡಾಟಾ' ಪ್ರಕಾರ, ಯುಎಸ್ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಜನರು ಕೋವಿಡ್ ಲಸಿಕೆಯ ಒಂದು ಪ್ರಮಾಣವನ್ನು ಮಾತ್ರ ಪಡೆದಿದ್ದಾರೆ. ಸುಮಾರು 30 ಸಾವಿರದ ಜನರು ನೊವಾವಾಕ್ಸ್‌ನ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಅವರಲ್ಲಿ 3ನೇ ಎರಡರಷ್ಟು ಜನರಿಗೆ ಎರಡು ಲಸಿಕೆಯನ್ನು ಮೂರು ವಾರಗಳ ಅಂತರದಲ್ಲಿ ನೀಡಲಾಗಿದೆ. ಉಳಿದವರಿಗೆ ನಿಷ್ಪರಿಣಾಮಕಾರಿ (ಡಮ್ಮಿ) ಲಸಿಕೆ ನೀಡಲಾಯಿತು.
ಈ ಲಸಿಕೆ ವೈರಸ್‌ನ ಹಲವು ಪ್ರಕಾರಗಳ ಮೇಲೆ ಪರಿಣಾಮಕಾರಿಯಾಗಿದೆ. ವಯಸ್ಸಾದವರು ಮತ್ತು ಆರೋಗ್ಯ ಸಮಸ್ಯೆಗಳಿರುವವರು ಸೇರಿದಂತೆ ಎಲ್ಲರೂ ಈ ಲಸಿಕೆ ಪಡೆಯಬಹುದು. ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ದೊಡ್ಡ ಪ್ರಮಾಣದ ಅಡ್ಡಪರಿಣಾಮಗಳಾಗಿಲ್ಲ ಎಂದು ಕಂಪನಿ ತಿಳಿಸಿದೆ.