ನ್ಯೂಯಾರ್ಕ್(ಅಮೆರಿಕ): ಭಾರತದಲ್ಲಿ ಕೋವಿಡ್ನಿಂದ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದರು. ಇದಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಹೊರತಾಗಿಲ್ಲ. ಉದ್ಯೋಗವಿಲ್ಲದೇ ಪರದಾಡುತ್ತಿದ್ದವರಿಗೆ ಅಲ್ಲಿನ ಸರ್ಕಾರ ಕೆಲ ಯೋಜನೆಗಳನ್ನು ಜಾರಿಗೆ ತಂದಿತ್ತು.
ಇದೀಗ ಆ ಯೋಜನೆಗಳ ಪೈಕಿ ಅನೇಕ ಯೋಜನೆಗಳನ್ನು ಕೈ ಬಿಟ್ಟಿದೆ ಬೈಡನ್ ಸರ್ಕಾರ. ಈವರೆಗೆ ನಿರುದ್ಯೋಗಿಗಳಿಗೆ ನೆರವಾಗಿದ್ದ ಎರಡು ಯೋಜನೆಗಳು ಹಾಗೂ ಬೈಡನ್ ಸರ್ಕಾರ ಜಾರಿಗೆ ತಂದಿದ್ದ ಸಾಪ್ತಾಹಿಕ ಯೋಜನೆ ಸೋಮವಾರಕ್ಕೆ ಅಂತ್ಯಗೊಂಡಿವೆ. ಅಂದಾಜು 8.9 ಮಿಲಿಯನ್ ಅಮೆರಿಕನ್ನರು ಈ ಯೋಜನೆಗಳ ಫಲಾನುಭವಿಗಳಾಗಿದ್ದರು ಎಂದು ಅಂದಾಜಿಸಲಾಗಿದೆ. ಕೆಲ ಬಿಲ್ಗಳ ಹಣ ಬಳಸಿಕೊಂಡು ಸಾಪ್ತಾಹಿಕ ಯೋಜನೆ ವಿಸ್ತರಿಸುವಂತೆ ಶ್ವೇತಭವನ ಸೂಚಿಸಿದರೂ ಯಾವ ರಾಜ್ಯಗಳೂ ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿಲ್ಲ.
ಕೋವಿಡ್ ಆರಂಭವಾದ ಅಂದಿನಿಂದ ಅಮೆರಿಕ ನಿರುದ್ಯೋಗದ ಯೋಜನೆಗಳಿಗೆ ಸರಿ ಸುಮಾರು 650 ಬಿಲಿಯನ್ ಹಣ ವ್ಯಯಿಸಿದೆ. ಫೆಡರಲ್ ಬಜೆಟ್‌ನ ಪಕ್ಷೇತರ ಸಮಿತಿಯ ಪ್ರಕಾರ, ಲಕ್ಷಾಂತರ ಅಮೆರಿಕನ್ನರು ಉದ್ಯೋಗ ಕಳೆದುಕೊಂಡರು. ಬ್ಯಾಂಕಿಂಗ್ ಉದ್ಯಮವು ಕಳೆದ 18 ತಿಂಗಳುಗಳಲ್ಲಿ ಜನರಿಗೆ ಸಾಲ ನೀಡುವ ಮೂಲಕ ಸರ್ಕಾರದ ಪರಿಹಾರ ಪ್ರಯತ್ನಗಳಿಗೆ ಕೈ ಜೋಡಿಸಿದೆ.
ನಿರುದ್ಯೋಗ ಯೋಜನೆಗಳನ್ನು ಕೈ ಬಿಟ್ಟಿದ್ದಕ್ಕೆ ಲಕ್ಷಾಂತರ ಅಮೆರಿಕನ್ನರು ಆತಂಕಕ್ಕೊಳಗಾಗಿದ್ದಾರೆ. ಬೈಡನ್ ಸರ್ಕಾರ ತೆಗೆದುಕೊಂಡ ಈ ನಿರ್ಧಾರದಿಂದ ಜನತೆ ಕಂಗಾಲಾಗಿದ್ದಾರೆ ಎಂದು ಸೆಂಚುರಿ ಫೌಂಡೇಶನ್ನ ಆಂಡ್ರ್ಯೂ ಸ್ಟೆಟ್ನರ್ ವರದಿಯಲ್ಲಿ ತಿಳಿಸಿದ್ದಾರೆ.
ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದು, ಆರ್ಥಿಕತೆ ಚೇತರಿಸಿಕೊಂಡಿದೆ. ಈ ಹಿನ್ನೆಲೆ ನಿರುದ್ಯೋಗದ ಯೋಜನೆಗಳನ್ನು ಅಂತ್ಯಗೊಳಿಸಲಾಗುತ್ತಿದೆ ಎನ್ನಲಾಗಿದೆ. ಆದರೆ, ಕೋವಿಡ್ ಬಂದ ನಂತರ ದೇಶದಲ್ಲಿ 5.7 ಮಿಲಿಯನ್ ಉದ್ಯೋಗಗಳು ಕಡಿಮೆಯಾಗಿವೆ ಎಂದು ಕಾರ್ಮಿಕ ಇಲಾಖೆ ಹೇಳಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಸೇರಿದಂತೆ ಯಾರಿಗೂ ಅವಕಾಶ ಕೊಡಲ್ಲ: ತಾಲಿಬಾನ್
ಸ್ನಾಪ್(SNAP) ಪ್ರಯೋಜನಗಳೆಂದು ಕರೆಯಲ್ಪಡುವ ಆಹಾರ ಸ್ಟ್ಯಾಂಪ್ ಸಹಾಯದಲ್ಲಿ ಶ್ವೇತಭವನವು ಶೇಕಡಾ 25 ರಷ್ಟು ಹೆಚ್ಚಳ ಮಾಡಿತು. ಆ ಪಾವತಿಗಳನ್ನು ಸ್ವೀಕರಿಸುವ 42.7 ಮಿಲಿಯನ್ ಅಮೆರಿಕನ್ನರಿಗೆ ಈ ಯೋಜನೆ ಅನಿರ್ದಿಷ್ಟವಾಗಿ ಮುಂದುವರಿಯುತ್ತದೆ.
2008-2009ರಲ್ಲಿ ಆರ್ಥಿಕ ಕುಸಿತದಿಂದಾಗಿ ದೇಶದಲ್ಲಿ ಬಿಕ್ಕಟ್ಟು ಉಂಟಾದ ಸಮಯದಲ್ಲಿ ಅಂದಿನ ಸರ್ಕಾರ ಕೆಲ ಯೋಜನೆಗಳನ್ನು ಜಾರಿಗೊಳಿಸಿತ್ತು. ಆರ್ಥಿಕತೆ ಚೇತರಿಕೆ ನಂತರವೂ 2013 ರವರೆಗೆ ಕೆಲ ಯೋಜನೆಗಳನ್ನು ಮುಂದುವರಿಸಿತ್ತು. ಸದ್ಯ ಬೈಡನ್ ಕೈಗೊಂಡಿರುವ ಈ ನಿರ್ಧಾರ ಅಮೆರಿಕದ ನಿರುದ್ಯೋಗಿಗಳಿಗೆ ಅಸಮಾಧಾನವನ್ನುಂಟು ಮಾಡಿದೆ.