ವಾಷಿಂಗ್ಟನ್: ಕೊರೊನಾ ಲಸಿಕೆ ಫೈಜರ್ ಅನ್ನು ಸೋಮವಾರ ಬೆಳಗ್ಗೆಯಿಂದ ದೇಶದ ಎಲ್ಲ ರಾಜ್ಯಗಳಿಗೆ ಹಂಚಲಾಗುವುದು ಎಂದು ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತದ ಆಪರೇಷನ್ ವಾರ್ಪ್ ಸ್ಪೀಡ್ ಮುಖ್ಯಸ್ಥ ಜನರಲ್ ಗುಸ್ಟಾವ್ ಪೆರ್ನಾ ಹೇಳಿದ್ದಾರೆ.
ಸೋಮವಾರ 145 ವಿತರಣಾ ತಾಣಗಳಿಗೆ ಲಸಿಕೆ ಲಭ್ಯವಾಗಲಿದೆ. ಮಂಗಳವಾರ 425, ಬುಧವಾರ 66 ತಾಣಗಳು ಲಸಿಕೆ ಸ್ವೀಕರಿಸುತ್ತವೆ ಎಂದು ಪೆರ್ನಾ ಹೇಳಿದ್ದಾರೆ. ಫೈಜರ್ ಮತ್ತು ಬಯೋಟೆಕ್‌ನ ಕೋವಿಡ್ -19 ಲಸಿಕೆ ಭಾನುವಾರ ಮಿಚಿಗನ್, ಕಲಾಮಜೂದಿಂದ ಸಾಗಣೆ ಆಗಲಿದೆ.
ಓದಿ: ಫೈಜರ್ -ಬಯೊಎನ್‌ಟೆಕ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅಮೆರಿಕ ಗ್ರೀನ್ ಸಿಗ್ನಲ್
16 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ತುರ್ತು ಸಂದರ್ಭದಲ್ಲಿ ಈ ಲಸಿಕೆಯನ್ನು ಬಳಸಲು ಯುಎಸ್ನ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಒಪ್ಪಿಗೆ ನೀಡಿತ್ತು.
ಈ ಲಸಿಕೆಯನ್ನು ಬಳಸಲು ಯುಕೆ, ಬಹ್ರೇನ್, ಕೆನಡಾ, ಸೌದಿ ಅರೇಬಿಯಾ ಮತ್ತು ಮೆಕ್ಸಿಕೊ ದೇಶಗಳು ಒಪ್ಪಿಗೆ ನೀಡಿದ್ದು, ಯುಎಸ್ ಇದೀಗ ಆರನೇ ದೇಶವಾಗಿದೆ.