ವಾಷಿಂಗ್ಟನ್: ಕೊರೊನಾ ವಿರುದ್ಧ ಹೋರಾಡಲು ಪ್ರಸ್ತುತ ಕನಿಷ್ಠ ಮೂರು ಲಸಿಕೆಗಳನ್ನು ಕಂಡುಹಿಡಿಯಲು ಭಾರತೀಯ ಮತ್ತು ಅಮೆರಿಕದ ಔಷಧಿ ಕಂಪನಿಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತಾರಂಜಿಂತ್ ಸಿಂಗ್ ಸಂಧು ಶನಿವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, "ವಿಶ್ವಾಸಾರ್ಹ ಪಾಲುದಾರ" ಯುಎಸ್ಗೆ ಅಗತ್ಯವಿರುವ ಯಾವುದೇ ಸಹಾಯ ಮಾಡಲು ಸಿದ್ಧ. ಇಂಟರ್ನ್ಯಾಷನಲ್ ಸೆಂಟರ್ ಫಾರ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಐಸಿಎಂಇಆರ್), ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು, ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು (ಎನ್ಐಹೆಚ್) ಹಲವಾರು ವರ್ಷಗಳಿಂದ ಯುಎಸ್ನೊಂದಿಗೆ ಒಳ್ಳೆಯ ಸಂಬಂಧ ಹೊಂದಿವೆ. ಕಂಪನಿಗಳ ಮಧ್ಯೆ ಮಾಹಿತಿ ವಿನಿಮಯವಿದೆ. ಜೊತೆಗೆ, ಕನಿಷ್ಠ ಮೂರು ಲಸಿಕೆಗಳನ್ನು ಕಂಡು ಹಿಡಿಯಲು ಉಭಯ ದೇಶಗಳ ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ವೈದ್ಯಕೀಯ ಸಂಶೋಧನೆಗೆ ಸಂಬಂಧಿಸಿದ ಮಾಹಿತಿ ವಿನಿಮಯದ ಬಗ್ಗೆ ಉಭಯ ದೇಶಗಳು ಸಹಕರಿಸುತ್ತಿರುವುದು ಇದೇ ಮೊದಲಲ್ಲ. ವಾಸ್ತವವಾಗಿ, ಸುಮಾರು ಎರಡು ಅಥವಾ ಮೂರು ವರ್ಷಗಳ ಹಿಂದೆ ಐಸಿಎಂಆರ್ ಮತ್ತು ಸಿಡಿಸಿ ಒಟ್ಟಾಗಿ ರೋಟವೈರಸ್ ಎಂಬ ಮತ್ತೊಂದು ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.