ವಾಷಿಂಗ್ಟನ್ (ಯುಎಸ್): ಟ್ರಂಪ್ ಸರ್ಕಾರದ ಸಮಯದಲ್ಲಿ ಸ್ಥಗಿತಗೊಂಡಿದ್ದ ಭಾರತದೊಂದಿಗೆ ಹೋಮ್ಲ್ಯಾಂಡ್ ಸೆಕ್ಯೂರಿಟಿ ಡೈಲಾಗ್ ಅನ್ನು ಪುನಃ ಸ್ಥಾಪಿಸುವುದಾಗಿ ಅಮೆರಿಕ ಅಧ್ಯಕ್ಷ ಬೈಡನ್ ಆಡಳಿತ ಪ್ರಕಟಿಸಿದೆ.
ಹೋಮ್ಲ್ಯಾಂಡ್ ಸೆಕ್ಯೂರಿಟಿ ಸೆಕ್ರೆಟರಿ ಅಲೆಜಾಂಡ್ರೊ ಮಯೋರ್ಕಾಸ್ ಅವರು ಸೋಮವಾರ ಅಮೆರಿಕದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರೊಂದಿಗೆ ಮಾತನಾಡಿ ಭಾರತ ಮತ್ತು ಅವರ ಇಲಾಖೆಯ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
"ಯುಎಸ್-ಇಂಡಿಯಾ ಹೋಮ್ಲ್ಯಾಂಡ್ ಸೆಕ್ಯೂರಿಟಿ ಡೈಲಾಗ್ ಅನ್ನು ಪುನಃ ಸ್ಥಾಪಿಸಲು ಮತ್ತು ಸೈಬರ್ ಸುರಕ್ಷತೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಪರಿಹರಿಸುವುದು ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮಯೋರ್ಕಾಸ್ ಮತ್ತು ಸಂಧು ಒಪ್ಪಿಕೊಂಡರು" ಎಂದು ಮಂಗಳವಾರ ಹೊರಡಿಸಿದ ಸಭೆಯ ರೀಡ್ಔಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಐಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಫೋಟ: ಸಾರ್ವಜನಿಕ ಪ್ರವೇಶಕ್ಕೆ ನಿಷೇಧ - VIDEO
ಒಬಾಮಾ ಆಡಳಿತದ ಸಮಯದಲ್ಲಿ ಮೊದಲ ಭಾರತ-ಯುಎಸ್ ಹೋಮ್ಲ್ಯಾಂಡ್ ಸೆಕ್ಯೂರಿಟಿ ಡೈಲಾಗ್ ಅನ್ನು ಮೇ 2011 ರಲ್ಲಿ ನಡೆಸಲಾಯಿತು. ಆಗಿನ ಹೋಮ್ಲ್ಯಾಂಡ್ ಸೆಕ್ಯೂರಿಟಿ ಕಾರ್ಯದರ್ಶಿ ಜಾನೆಟ್ ನಪೊಲಿಟಾನೊ ಅವರು ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಎರಡನೇ ಭಾರತ-ಯುಎಸ್ ಹೋಮ್ಲ್ಯಾಂಡ್ ಸೆಕ್ಯೂರಿಟಿ ಡೈಲಾಗ್ 2013 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ, ನಾಪೊಲಿಟಾನೊ ಮತ್ತು ಅಂದಿನ ಗೃಹ ಸಚಿವ ಸುಶೀಲ್ ಕುಮಾರ್ ನಡುವೆ ನಡೆದಿತ್ತು.