ನವದೆಹಲಿ: 'ಶುದ್ಧ ಇಂಧನ' ನೀತಿ ಅನುಸರಿಸುವ ಭಾರತ, ಹೂಡಿಕೆಗೆ ಅತ್ಯುತ್ತಮ ದೇಶ ಎಂದು ಹವಾಮಾನ ವಿಶೇಷ ಅಧ್ಯಕ್ಷರ ರಾಯಭಾರಿ ಜಾನ್ ಕೆರ್ರಿ ಗುರುವಾರ 2021ರ ವಿಶ್ವ ಸುಸ್ಥಿರ ಶೃಂಗಸಭೆಯಲ್ಲಿ ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯಿಂದ ಎದುರಾಗುವ ಸವಾಲನ್ನು ಪರಿಹರಿಸಲು ಮುಂದಾಗಿರುವ, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನ ಮತ್ತು ಬದ್ಧತೆಯನ್ನು ಅವರು ಶ್ಲಾಘಿಸಿದರು. ಭಾರತ ಹೂಡಿಕೆ ಮಾಡಲು ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ಭಾರತದೊಂದಿಗೆ ಕೆಲಸ ಮಾಡಲು ನಾವು ಉತ್ಸುಕವಾಗಿದ್ದೇವೆ ಎಂದು ಕೆರ್ರಿ ಹೇಳಿದ್ದಾರೆ.
ಜೋ ಬೈಡನ್ ಸರ್ಕಾರದಲ್ಲಿ ಹವಾಮಾನ ಕುರಿತ ವಿಚಾರಗಳ ವಿಶೇಷ ಅಧಿಕಾರಿಯಾಗಿರುವ ಜಾನ್ ಕೆರ್ರಿ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಜತೆಗೆ ಕೆಲಸ ಮಾಡಲು ಇಚ್ಛಿಸುತ್ತೇವೆ. ಉಭಯ ರಾಷ್ಟ್ರಗಳು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೆಲಸ ಮಾಡಲಿವೆ ಎಂದು ತಿಳಿಸಿದ್ದಾರೆ.