ನ್ಯೂಯಾರ್ಕ್: ಭಾರತದಲ್ಲಿ ಧೀರ್ಘಕಾಲದ ಮಾರುಕಟ್ಟೆಗೆ ಉತ್ತಮ ಅವಕಾಶಗಳಿದ್ದರೆ ಅಲ್ಪಾವಧಿಯ ಮಾರುಕಟ್ಟೆ ಸಾಕಷ್ಟು ಸವಾಲುಗಳಿಂದ ಕೂಡಿದೆ ಎಂದು ತಂತ್ರಜ್ಞಾನ ದಿಗ್ಗಜ ಕಂಪನಿಯಾದ ಆ್ಯಪಲ್ ಸಿಇಒ ಟಿಮ್ ಕುಕ್ ವಿಶ್ಲೇಷಿಸಿದ್ದಾರೆ.
2019ನೇ ಸಾಲಿನ ಕಂಪನಿಯ ಎರಡನೇ ತ್ರೈಮಾಸಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಚಿಲ್ಲರೆ ಮಳಿಗೆ ಹಾಗೂ ಉತ್ಪನ್ನಗಳ ಮುಖೇನ ಭಾರತೀಯ ಮಾರುಕಟ್ಟೆಯನ್ನು ಹಾದು ಹೋಗಲು ನಾವು ಯೋಜನೆ ರೂಪಿಸುತ್ತಿದ್ದೇವೆ. ಅಲ್ಲಿ ಧೀರ್ಘಕಾಲದ ಮಾರುಕಟ್ಟೆಗೆ ಸಕಾರಾತ್ಮಕ ಅಂಶಗಳಿವೆ. ಆದರೆ, ಅಲ್ಪಾವಧಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.
ಧೀರ್ಘಾವಧಿಗೆ ಭಾರತ ವಿಶ್ವದ ಪ್ರಮುಖ ಮಾರುಕಟ್ಟೆಯೆಂದು ನಾನು ಭಾವಿಸುತ್ತೇನೆ. ಆದರೆ, ಇದು ಅಲ್ಪಾವಧಿಗೆ ಅತ್ಯಂತ ಸವಾಲಿನ ಮಾರುಕಟ್ಟೆಯೂ ಹೌದು. ಆದರೆ, ನಾವು ಇದರಿಂದ ಸಾಕಷ್ಟು ಕಲಿಯುತ್ತೇವೆ ಎಂದು ಕುಕ್ ಭವಿಷ್ಯ ನುಡಿದರು.
ಆ್ಯಪಲ್ ಪ್ರೀಮಿಯಂ ಸ್ಮಾರ್ಟ್ಫೋನ್ ವಿಭಾಗದಲ್ಲಿ ತೀವ್ರವಾದ ಸ್ಪರ್ಧೆ ಎದುರಾಗಿತ್ತು. ಕಳೆದ ತಿಂಗಳು ಐಪೋನ್ ಎಕ್ಸ್ಆರ್ನ ಬೆಲೆಯಲ್ಲಿ ಶೇ 22ರಷ್ಟು ರಿಯಾಯಿತಿ ನೀಡಲಾಗಿದೆ. 'ಆ್ಯಪಲ್ ಭಾರತದಲ್ಲಿ ತನ್ನ ಉತ್ಪಾದನೆ ಕಾರ್ಯ ಆರಂಭಿಸಿದೆ. ನ್ಯಾಯಯುತವಾದ ಬೆಲೆಯ ಮುಖೇನ ಭಾರತದ ಮಾರುಕಟ್ಟೆ ಪ್ರವೇಶಸಿದ್ದೇವೆ. ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ' ಎಂದು ಬೆಲೆ ಇಳಿಕೆಯ ಹಿಂದಿನ ಉದ್ದೇಶವನ್ನು ಟಿಮ್ ಕುಕ್ ತೆರೆದಿಟ್ಟರು.
ಆ್ಯಪಲ್ ಭಾರತದಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲು ಬಯಸುತ್ತದೆ. ಇದನ್ನು ಕಾರ್ಯರೂಪಕ್ಕೆ ತರಲು ಅಲ್ಲಿನ ಸರ್ಕಾರದೊಂದಿಗೆ ಮಾತನಾಡಿ ಅನುಮೋದನೆ ಪಡೆಯುತ್ತೇವೆ. ನಮ್ಮ ಎಲ್ಲ ರೀತಿಯ ಶಕ್ತಿಯೊಂದಿಗೆ ಅಲ್ಲಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.