ವಾಷಿಂಗ್ಟನ್(ಅಮೆರಿಕ): ರಷ್ಯಾದಿಂದ ಭಾರತ ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್ ಖರೀದಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ವಿರೋಧಿ ನಡೆ ಅನುಸರಿಸುವ ರಾಷ್ಟ್ರಗಳ ಮೇಲೆ ವಿಧಿಸುವ CAATSA ಅಥವಾ ಕಾಟ್ಸಾ ಕಾಯ್ದೆಯನ್ನು ಭಾರತಕ್ಕೆ ವಿಧಿಸದಿರಲು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕ ಮಂಗಳವಾರ ಸ್ಪಷ್ಟನೆ ನೀಡಿದೆ.
ಭಾರತಕ್ಕೆ ಎಸ್ - 400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹಸ್ತಾಂತರ ಮಾಡುವ ಕಾರ್ಯವನ್ನು ಈಗಾಗಲೇ ರಷ್ಯಾ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲೆ ಕಾಟ್ಸಾ ನಿರ್ಬಂಧಗಳನ್ನು ವಿಧಿಸದಂತೆ ಅಮೆರಿಕ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಸಂಸದರು ಬೈಡನ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ಇಲಾಖೆ ಈ ರೀತಿಯ ಹೇಳಿಕೆ ಪ್ರಕಟಿಸಿದೆ.
ನಮ್ಮ ಪಾಲುದಾರ ರಾಷ್ಟ್ರಗಳು ರಷ್ಯಾದೊಂದಿಗೆ ಯಾವುದೇ ವಹಿವಾಟು ನಡೆಸದಂತೆ ನಾವು ನಿರ್ಬಂಧ ಹೇರಿದ್ದೇವೆ. ಭಾರತದ ವಿಚಾರದಲ್ಲಿ ಎಸ್ - 400 ವಿಚಾರಕ್ಕೆ ಬರುವುದಾದರೆ ನಾವಿನ್ನೂ ಸ್ಪಷ್ಟವಾಗಿದ್ದೇವೆ. ಭಾರತದ ಮೇಲೆ ನಿರ್ಬಂಧ ವಿಧಿಸುವ CAATSA ಕಾಯ್ದೆಯನ್ನು ಭಾರತದ ವಿಚಾರದಲ್ಲಿ ಮನ್ನಾ ಮಾಡಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
ಅಮೆರಿಕ ಸಂಸತ್ನ ಹಲವು ಸದಸ್ಯರು ಈ ಬಗ್ಗೆ ಕಾಳಜಿ ವಹಿಸಿದ್ದಾರೆ. ನಾವು ಭಾರತದೊಂದಿಗಿನ ಪಾಲುದಾರಿಕೆಯನ್ನು ಖಂಡಿತವಾಗಿಯೂ ಗೌರವಿಸುತ್ತೇವೆ. ಆಗಸ್ಟ್‌ನಲ್ಲಿ ವಿದೇಶಾಂಗ ಮಂತ್ರಿ ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಕೆಲವು ವಿಚಾರಗಳ ಬಗ್ಗೆ ನೇರವಾಗಿ ಚರ್ಚೆ ನಡೆಸಲಾಗಿದೆ ಎಂದು ನೆಡ್ ಪ್ರೈಸ್ ಸ್ಪಷ್ಟನೆ ನೀಡಿದ್ದಾರೆ.
What is CAATSA?: ಅಮೆರಿಕ ತನ್ನ ಹಿತಾಸಕ್ತಿಯ ರಕ್ಷಣೆಗಾಗಿ ರೂಪಿಸಿದ ಕಾಯ್ದೆ ಇದಾಗಿದೆ. ಕಾಟ್ಸಾ CAATSA- Countering America's Adversaries Through Sanctions Act ಅಮೆರಿಕ ಹಿತಾಸಕ್ತಿಗಳ ವಿರುದ್ಧ ಇರುವ ರಾಷ್ಟ್ರಗಳ ಮೇಲೆ ನಿರ್ಬಂಧ ಹೇರುವ ಸಲುವಾಗಿ ಈ ಕಾಯ್ದೆಯನ್ನು ರೂಪಿಸಿದೆ.
ಈಗ ಸದ್ಯಕ್ಕೆ ರಷ್ಯಾನಿರ್ಮಿತ ಎಸ್-400 ಮಿಸೈಲ್ ವ್ಯವಸ್ಥೆಯನ್ನು ಭಾರತ ಖರೀದಿಸಲು ಮುಂದಾಗಿದೆ. ಆದರೆ, ರಷ್ಯಾದಿಂದ ಈ ಮಿಸೈಲ್ ಅನ್ನು ಖರೀದಿಸುವುದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಈ ಮಿಸೈಲ್ ವ್ಯವಸ್ಥೆಯನ್ನು ಖರೀದಿಸಿದರೆ ಅಮೆರಿಕ ಸಿಎಎಟಿಎಸ್ಎ ನಿರ್ಬಂಧವನ್ನು ಭಾರತದ ಮೇಲೆ ಹೇರುವುದಾಗಿ ಇತ್ತೀಚೆಗೆ ಹೇಳಿಕೊಂಡಿತ್ತು.
ಭಾರತ ಈಗ ಎಸ್-400 ಅನ್ನು ಖರೀದಿಸಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿದ್ದಾಗ ಅಮೆರಿಕದ ಕೆಲವು ಸೆನೆಟರ್ಗಳೇ ಈಗ ಭಾರತದ ಮೇಲೆ ಸಿಎಎಟಿಎಸ್ಎ ಹೇರಬಾರದು ಎಂದು ಅಧ್ಯಕ್ಷ ಜೋ ಬೈಡನ್ಗೆ ಮನವಿ ಮಾಡಿವೆ. ಚೀನಾ ಕೂಡಾ ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಿರುವುದು ಕೂಡಾ ಇಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಂಗನಾ ರಣಾವತ್, ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹದ ಕೇಸ್ ದಾಖಲಿಸಿದ ಕೆಪಿವೈಸಿಸಿ