ನ್ಯೂಯಾರ್ಕ್: ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಅವರು ಗುರುವಾರ ವಿಶ್ವ ವ್ಯಾಪಾರ ಕೇಂದ್ರ(World Trade Center)ದಲ್ಲಿರುವ ವೀಕ್ಷಣಾಲಯಕ್ಕೆ ಭೇಟಿ ನೀಡಿದ್ದಾರೆ. ಸದ್ಯ ನ್ಯೂಯಾರ್ಕ್ ಪ್ರವಾಸದಲ್ಲಿರುವ ಹ್ಯಾರಿ ಮತ್ತು ಮೇಘನ್ ಪ್ರವಾಸಕ್ಕೆ ಅಲ್ಲಿನ ಮೇಯರ್ ಫ್ಯಾಮಿಲಿ ಸಾಥ್ ನೀಡಿದೆ.
ಗವರ್ನರ್ ಕ್ಯಾತಿ ಹೊಚುಲ್, ನ್ಯೂಯಾರ್ಕ್ ಸಿಟಿ ಮೇಯರ್ ಬಿಲ್ ಡಿ ಬ್ಲಾಸಿಯೊ, ಡಿ ಬ್ಲಾಸಿಯೊ ಅವರ ಪತ್ನಿ ಚಿರ್ಲೇನ್ ಮೆಕ್ರೇ ಮತ್ತು ಅವರ ಪುತ್ರ ಡಾಂಟೆ ಡಿ ಬ್ಲಾಸಿಯೊ ಅವರು ಹ್ಯಾರಿ ಮತ್ತು ಮೇಘನ್ ಜೊತೆ 1,268 ಅಡಿ ಎತ್ತರದಲ್ಲಿ ನಿಂತು (386 ಮೀಟರ್) ಫೋಟೋಗೆ ಪೋಸ್ ನೀಡಿದ್ದಾರೆ.
ಹ್ಯಾರಿ- ಮೇಘನ್ ದಂಪತಿ ಈ ಪ್ರವಾಸವನ್ನು ಸಖತ್ ಎಂಜಾಯ್ ಮಾಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. 102 ನೇ ಮಹಡಿ ಮೇಲೆ ನಿಂತು ಇಡೀ ನ್ಯೂಯಾರ್ಕ್ ನಗರವನ್ನು ಕಣ್ತುಂಬಿಕೊಂಡ ಬಳಿಕ ಫೋಟೋಗಳನ್ನು ತೆಗೆಸಿಕೊಂಡರು.
ಬಳಿಕ 2011 ಸೆಪ್ಟೆಂಬರ್ 11 ರಂದು ಅಲ್ಖೈದಾ ಉಗ್ರ ಸಂಘಟನೆ ದಾಳಿ ನಡೆಸಿದ್ದ ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಬಳಿ ತೆರಳಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಬ್ರಿಟನ್ ರಾಜಮನೆತನದ ಜೋಡಿ, ಕೋವಿಡ್ ಲಸಿಕೆಗಳಿಗೆ ಸಮಾನ ಪ್ರವೇಶವನ್ನು ಉತ್ತೇಜಿಸಲು ಸೆಂಟ್ರಲ್ ಪಾರ್ಕ್‌ನಲ್ಲಿ ಶನಿವಾರದ ಗ್ಲೋಬಲ್ ಸಿಟಿಜನ್ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದೆ.
ಇದನ್ನೂ ಓದಿ: ''UNSC ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸುಧಾರಣೆಗಳು ಅಗತ್ಯ''- G4 ರಾಷ್ಟ್ರಗಳ ಒತ್ತಾಯ
ಜೂನ್ನಲ್ಲಿ ಅವರ ಮಗಳು ಲಿಲಿಬೆಟ್ 'ಲಿಲಿ' ಡಯಾನಾ ಮೌಂಟ್ ಬ್ಯಾಟನ್-ವಿಂಡ್ಸರ್ ಜನಿಸಿದ ನಂತರ ಇದು ದಂಪತಿ ಮೊದಲ ಪ್ರವಾಸವಾಗಿತ್ತು. ದಂಪತಿ ಬ್ರಿಟನ್ನಲ್ಲಿ ರಾಜ ಮನೆತನದ ಹುದ್ದೆ ತೊರೆದು, ಸದ್ಯ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ.