ನ್ಯೂಯಾರ್ಕ್: ಇಡೀ ಜಗತ್ತೇ ಕೊರೊನಾ ಬಿಕ್ಕಟ್ಟು ಎದುರಿಸುತ್ತಿರುವಾಗ ಇತರೆ ದೇಶಗಳಿಗೆ ಸಹಾಯ ಮಾಡುತ್ತಿರುವ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಮ್ಮ ಅಭಿನಂದಿಸಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಹಲವಾರು ದೇಶಗಳಿಗೆ ಭಾರತ ನೆರವು ಕಳುಹಿಸುತ್ತಿರುವ ಬಗ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ವೈರಸ್ ವಿರುದ್ಧದ ಈ ಹೋರಾಟದಲ್ಲಿ ಜಾಗತಿಕ ಒಗ್ಗಟ್ಟು ಪ್ರದರ್ಶಿಸಬೇಕೆಂದು ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ. ಇದರ ಅರ್ಥ ಪ್ರತಿ ದೇಶವೂ ಮತ್ತೊಂದು ದೇಶಕ್ಕೆ ಸಹಾಯ ಮಾಡುವುದು. ಹೀಗೆ ಸಹಾಯ ಮಾಡುವ ದೇಶಗಳಿಗೆ ನಾವು ವಂದಿಸುತ್ತೇವೆ' ಎಂದು ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.
ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡಲು ಭಾರತ ಪ್ರಸ್ತಾಪಿಸಿದೆ. ಅಮೆರಿಕ, ಬ್ರೆಜಿಲ್ ಮತ್ತು ಇಸ್ರೇಲ್ ಸೇರಿದಂತೆ ಹಲವಾರು ದೇಶಗಳಿಗೆ ಔಷಧಿಗಳನ್ನು ಕಳುಹಿಸಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತ ಆರೋಗ್ಯ ವೃತ್ತಿಪರರನ್ನು ಕುವೈತ್ ಮತ್ತು ಮಾಲ್ಡೀವ್ಸ್ಗೆ ಕಳುಹಿಸಿದೆ.
ಆದರೆ ವಿಶ್ವಸಂಸ್ಥೆಯ ಪ್ರತಿಕ್ರಿಯೆಗೆ ವ್ಯತಿರಿಕ್ತವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ಅನ್ನು ಅಮೆರಿಕಕ್ಕೆ ಕಳುಹಿಸುವುದನ್ನು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರರು ಟೀಕಿಸಿದ್ದಾರೆ.