ವಾಷಿಂಗ್ಟನ್ ಡಿಸಿ (ಅಮೆರಿಕ): ಗ್ರ್ಯಾಮಿ ಪ್ರಶಸ್ತಿ ವಿಜೇತ, ಅಮೆರಿಕ ಸಂಗೀತದ ದಂತಕತೆ ಚಾರ್ಲಿ ಡೇನಿಯಲ್ಸ್ ತಮ್ಮ 83ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ''ದ ಡೆವಿಲ್ ವೆಂಟ್ ಡೌನ್ ಟು ಜಾರ್ಜಿಯಾ'' ಎಂಬ ಆಲ್ಬಮ್ನಿಂದ ಇವರು ಖ್ಯಾತಿ ಪಡೆದಿದ್ದರು.
ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದಂತೆ ಮೆದುಳಿನ ರಕ್ತಸ್ರಾವದಿಂದಾಗಿ ಅವರು ಅಮೆರಿಕದ ಟೆನ್ನೆಸ್ಸೀ ನಗರದಲ್ಲಿರುವ ಸಮ್ಮಿಟ್ ಮೆಡಿಕಲ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಗ್ರ್ಯಾಂಡ್ ಒಲೆ ಓಪ್ರಿಯ ಸದಸ್ಯರಾಗಿದ್ದ ಡೇನಿಯಲ್ ಮ್ಯೂಜಿಷಿಯನ್ಸ್ ಹಾಲ್ ಆಫ್ ಫೇಮ್, ಕಂಟ್ರಿ ಮ್ಯೂಸಿಕ್ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದು, ಗೋಸ್ಪೆಲ್ ಆಲ್ಬಮ್ಗೆ ಡವ್ ಪ್ರಶಸ್ತಿಯನ್ನು ಪಡೆದಿದ್ದರು. ಸಂಗೀತಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಸಿದ್ಧ ಗ್ರ್ಯಾಮಿ ಪ್ರಶಸ್ತಿಯನ್ನೂ ಇವರಿಗೆ ನೀಡಲಾಗಿತ್ತು.
1979ರಲ್ಲಿ ಬಿಡುಗಡೆಯಾಗಿದ್ದ ಇವರ ''ದ ಡೆವಿಲ್ ವೆಂಟ್ ಡೌನ್ ಟು ಜಾರ್ಜಿಯಾ'' ಎಂಬ ಆಲ್ಬಮ್ ಅಮೆರಿಕದಲ್ಲೇ ಮೊದಲನೇ ಸ್ಥಾನ ಪಡೆದಿದ್ದು, ಕಂಟ್ರಿ ಮ್ಯೂಸಿಕ್ ಅಸೋಸಿಯೇಷನ್ನಿಂದ ಮನ್ನಣೆಗೂ ಪಾತ್ರವಾಗಿತ್ತು.
ಸಂಗೀತದಿಂದ ಮಾತ್ರವಲ್ಲದೇ ಬೇರೆ ಬೇರೆ ಕಾರಣಗಳಿಗೂ ಚಾರ್ಲಿ ಡೇನಿಯಲ್ಸ್ ಹೆಸರುವಾಸಿಯಾಗಿದ್ದರು. ದ ಜರ್ನಿ ಹೋಮ್ ಪ್ರಾಜೆಕ್ಟ್ ಎಂಬ ಅಮೆರಿಕ ಸೈನಿಕರಿಗೆ ಸಹಾಯ ಮಾಡುವ ಸಂಸ್ಥೆಯನ್ನು ರೂಪಿಸಿ ಹೆಸರುವಾಸಿಯಾಗಿದ್ದರು. ಇದರ ಮೂಲಕ ಸೈನಿಕರು, ಮಾಜಿ ಸೈನಿಕರ ನೆರವಿಗೆ ಧಾವಿಸುತ್ತಿದ್ದರು.