ಸ್ಯಾನ್ ಫ್ರಾನ್ಸಿಸ್ಕೋ (ಯು.ಎಸ್): ಮನೆಯಿಂದಲೇ ಕೆಲಸ ಮಾಡುತ್ತಿರುವ ಗೂಗಲ್ ಉದ್ಯೋಗಿಗಳಿಗೆ ಅಗತ್ಯ ಉಪಕರಣಗಳು ಮತ್ತು ಪೀಠೋಪಕರಣಗಳ ವೆಚ್ಚಗಳಿಗಾಗಿ $ 1,000 (ಸುಮಾರು 75,000 ರೂ.) ನೀಡಲು ಸಂಸ್ಥೆ ನಿರ್ಧರಿಸಿದ್ದು, ಜುಲೈ 6ರಿಂದ ಹಂತ ಹಂತವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಲು ನಿರ್ಧಿರಿಸಿದೆ.
ಜುಲೈ 6 ರಿಂದ ಹೆಚ್ಚಿನ ನಗರಗಳಲ್ಲಿ ಕಂಪನಿಯ ಕಾರ್ಯ ಪುನರಾರಂಭವಾಗಲಿದೆ ಎಂದು ಆಲ್ಫಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.
ಮೊದಲಿಗೆ ಕೆಲವರನ್ನು ಕಚೇರಿಗೆ ಕರೆಸಿಕೊಂಡು ಬಳಿಕ ಸೆಪ್ಟೆಂಬರ್ ವೇಳೆಗೆ ಶೇಕಡಾ 30ರಷ್ಟು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಲಾಗುವುದು ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಜೂನ್ 10ರೊಳಗೆ ನಿಮ್ಮ ವ್ಯವಸ್ಥಾಪಕರು ಕಾರ್ಯವೈಖರಿಯ ಬಗ್ಗೆ ನಿಮಗೆ ತಿಳಿಸುತ್ತಾರೆ. ಕಚೇರಿಗೆ ಮರಳುವವರು ಬರಬಹುದು, ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬಹುದು ಪಿಚೈ ಹೇಳಿದರು.