ನ್ಯೂಯಾರ್ಕ್: ಇಂಡಿಯಾನಾಪೊಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಫೆಡ್ಎಕ್ಸ್ ಕಂಪನಿಯಲ್ಲಿ 19 ವರ್ಷದ ಮಾಜಿ ಉದ್ಯೋಗಿ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ನಾಲ್ವರು ಸಿಖ್ಖರು ಸಾವನ್ನಪ್ಪಿದ್ದಾರೆ ಎಂದು ಸಿಖ್ ಒಕ್ಕೂಟ ತಿಳಿಸಿದೆ.
ಗುರುವಾರ ರಾತ್ರಿ ಅಮೆರಿಕದ ಇಂಡಿಯಾನಾಪೊಲಿಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 8 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಭಾರತೀಯ ಮೂಲದ ನಾಲ್ವರು ಸಿಖ್ ಸಮುದಾಯದವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಬಂದೂಕುಧಾರಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗಾಯಾಳುಗಳಲ್ಲಿ ತಮ್ಮ ಸೋದರ ಸೊಸೆಯೂ ಇದ್ದಾರೆ ಎಂದು ಭಾರತೀಯ ಮೂಲದ ವ್ಯಕ್ತಿ ಪರಮಿಂದರ್ ಸಿಂಗ್ ಹೇಳಿಕೊಂಡಿದ್ದಾರೆ. ದಾಳಿ ವೇಳೆ ಆಕೆ ಕಾರಿನಲ್ಲಿ ಕುಳಿತುಕೊಂಡಿದ್ದಳು ಎನ್ನಲಾಗ್ತಿದೆ.
ಇದನ್ನೂ ಓದಿ: ಹಿಂಸಾತ್ಮಕ ಪ್ರತಿಭಟನೆ : ಪಾಕ್‌ನಲ್ಲಿ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿಷೇಧ
ಪೊಲೀಸ್ ಡೆಪ್ಯೂಟಿ ಚೀಫ್ ಕ್ರೇಗ್ ಮೆಕ್ಕರ್ಟ್ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಬ್ರಿಯಾನ್ ಹೋಲ್ ಎಂದು ಗುರುತಿಸಲಾಗಿದೆ. ಆತ ಫೆಡ್ಎಕ್ಸ್ ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ. ಆದರೆ ಕಳೆದ ವರ್ಷ ಕೆಲಸ ತೊರೆದಿದ್ದ ಎಂದು ಮಾಹಿತಿ ನೀಡಿದ್ದಾರೆ.