ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ನಲ್ಲಿ ಕೊರೊನಾ ತಗುಲಿದ ಮೊದಲ ಶ್ವಾನವಾಗಿದ್ದ 7 ವರ್ಷದ ಜರ್ಮನ್ ಶೆಫರ್ಡ್ ಮೃತಪಟ್ಟಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಾಲೀಕನಿಗೆ ಕಳೆದ ಏಪ್ರಿಲ್ನಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಬಳಿಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬುಡ್ಡಿ ಹೆಸರಿನ ಜರ್ಮನ್ ಶೆಫರ್ಡ್ ತಳಿಯ ನಾಯಿಗೆ ಕೂಡ ಮೇ ತಿಂಗಳಲ್ಲಿ ವೈರಸ್ ಅಂಟಿತ್ತು. ಜೂನ್ನಲ್ಲಿ ಅಮೆರಿಕ ಕೃಷಿ ಇಲಾಖೆಯು ಕೋವಿಡ್ ಪಾಸಿಟಿವ್ ಬಂದಿರುವ ದೇಶದ ಮೊದಲ ನಾಯಿ ಇದಾಗಿದೆ ಎಂದು ವರದಿ ಮಾಡಿತ್ತು. ನಾಯಿಯ ಮಾಲೀಕನ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.
ಆದರೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ರಕ್ತ ವಾಂತಿ ಮಾಡಿಕೊಳ್ಳಲು ಆರಂಭಿಸಿದ ಶ್ವಾನ ಜುಲೈ 11ರಂದು ಮೃತಪಟ್ಟಿದೆ. ಕೊರೊನಾ ವೈರಸ್ನಿಂದಲೇ ಮೃತಪಟ್ಟಿದೆಯೇ ಎಂಬುದರ ಕುರಿತು ಮಾಹಿತಿ ತಿಳಿದು ಬಂದಿಲ್ಲ. ರಕ್ತ ಪರೀಕ್ಷೆ ವರದಿಯಲ್ಲಿ ನಾಯಿಗೆ ಒಂದು ಬಗೆಯ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
ಅಮೆರಿಕದಲ್ಲಿ ಈವರೆಗೆ 12 ನಾಯಿಗಳು, 10 ಬೆಕ್ಕುಗಳು, ಒಂದು ಹುಲಿ ಮತ್ತು ಒಂದು ಸಿಂಹಕ್ಕೆ ಕೊರೊನಾ ಸೋಂಕು ತಗುಲಿದೆ.