ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಇಂದು ಪ್ರಕಟಿಸಿರುವ ಕೊರೊನಾ ವೈರಸ್ ಟಾಸ್ಕ್ಪೋರ್ಸ್ಗೆ ಭಾರತೀಯ-ಅಮೆರಿಕದ ವೈದ್ಯ ಡಾ.ವಿವೇಕ್ ಮೂರ್ತಿ ಪ್ರಮುಖರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಮೂಲದ ವಿವೇಕ್ ಮೂರ್ತಿ 2014ರಲ್ಲಿ ಅಮೆರಿಕದ 19ನೇ ಸರ್ಜನ್ ಜನರಲ್ ಆಗಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಂದ ನೇಮಕಗೊಂಡಿದ್ದರು.ಯುಕೆಯಲ್ಲಿ ಜನಿಸಿದ ಅವರು 37ನೇ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಟ್ರಂಪ್ ಆಡಳಿತದಲ್ಲಿ ಹುದ್ದೆಯಿಂದ ಕೆಳಗಿಳಿದರು.
ಅಧ್ಯಕ್ಷರಾಬಗಿ ಚುನಾಯಿತರಾಗಿರುವ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಶನಿವಾರ ತಮ್ಮ ವಿಜಯದ ಭಾಷಣ ಮಾಡುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ಕಿತ್ತು ಹಾಕಿದ್ದ ಕೆಲ ಅಧಿಕಾರಿಗಳ ಮರುನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದರು. ಇದೀಗ ಬೈಡನ್ ಕೊರೊನಾ ಟಾಸ್ಕ್ ಪೋರ್ಸ್ನ 10 ಸದಸ್ಯರ ಪಟ್ಟಿಯಲ್ಲಿ ವಿವೇಕ್ ಮೂರ್ತಿ ಸ್ಥಾನ ಪಡೆದಕೊಂಡಿದ್ದು, ಅಗ್ರಸ್ಥಾನದಲ್ಲಿದ್ದಾರೆ.
ಇವರ ಜತೆಗೆ ಟಾಸ್ಕ್ ಪೋರ್ಸ್ನಲ್ಲಿ ಡಾ. ಡೇವಿಡ್ ಕೆಸ್ಲರ್, ಮಾರ್ಸೆಲ್ಲಾ ನುನೆಜ್ ಸ್ಮಿತ್, ಖ್ಯಾತ ಶಸ್ತ್ರಚಿಕಿತ್ಸಿಕ ಡಾ. ಅತುಲ್ ಗವಾಂಡೆ, ಡಾ. ಮೈಕಲ್ ಓಸ್ಟರ್ಹೋಮ್, ಡಾ. ಬೋರಿಯೊ ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ನಿಯಂತ್ರಣ ಮಾಡುವಲ್ಲಿ ಡೊನಾಲ್ಡ್ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದರು. ಇದೀಗ ಬೈಡನ್ ಅದಕ್ಕಾಗಿ ಹೊಸ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದಾರೆ.
ನಾಳೆಯಿಂದಲೇ ಅಧಿಕೃತವಾಗಿ ಕೆಲಸ ಪ್ರಾರಂಭ ಮಾಡುವ ಸಾಧ್ಯತೆ ಇದೆ. ವಿವೇಕ್ ಮೂರ್ತಿ 2015ರಲ್ಲಿ ಬರಾಕ್ ಒಬಾಮಾ ಆಡಳಿತದ ವೇಳೆ ಅಮೆರಿಕದ ಉನ್ನತ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಇನ್ನು ಬೈಡನ್ ಪರ ಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕ ಆರೋಗ್ಯ ಮತ್ತು ಕೊರೊನಾ ವೈರಸ್ ವಿಚಾರಗಳಿಗೆ ಸಂಬಂಧಿಸಿದಂತೆ ಡಾ. ವಿವೇಕ್ ಮೂರ್ತಿ ಮಹತ್ವದ ಮಾಹಿತಿ ನೀಡುತ್ತಿದ್ದರು.