ವಿಶ್ವಸಂಸ್ಥೆ: ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದನೆಗೆ ಬಳಸದೇ ಇರುವುದನ್ನು ಜಗತ್ತಿನ ರಾಷ್ಟ್ರಗಳು ಖಚಿತ ಪಡಿಸಿಕೊಳ್ಳಬೇಕೆಂದು ಮತ್ತು ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಸಿಕೊಳ್ಳುವ ರಾಷ್ಟ್ರಗಳಿಗೂ ಭಯೋತ್ಪಾದನೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ನಾವು ಮುಂದಿನ ಪೀಳಿಗೆಯ ಜನರಿಗೆ ಉತ್ತರ ನೀಡಲೇಬೇಕು. ಇದು ನಿರ್ಧಾರ ತೆಗೆದುಕೊಳ್ಳುವ ಸಮಯ. ಈ ಸಮಯದಲ್ಲಿ ನಾವು ಏನು ಮಾಡುತ್ತಿದ್ದೇವೆ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಇಂದಿನ ಜಗತ್ತು ಉಗ್ರವಾದದ ಬೆದರಿಕೆಯನ್ನು ಎದುರಿಸುತ್ತಿದೆ. ವಿಜ್ಞಾನ ಆಧಾರಿತ, ತರ್ಕಬದ್ಧ ಮತ್ತು ಪ್ರಗತಿಪರ ಚಿಂತನೆಯನ್ನು ಅಭಿವೃದ್ಧಿಯ ಆಧಾರವನ್ನಾಗಿಸಿ ನಾವು ಯೋಚಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಸಾಧನವನ್ನಾಗಿ ಬಳಸುತ್ತಿರುವ ರಾಷ್ಟ್ರಗಳಿಗೂ, ಭಯೋತ್ಪಾದನೆ ಅಪಾಯಕಾರಿ ಎಂಬುದನ್ನು ಆ ರಾಷ್ಟ್ರಗಳು ಅರ್ಥ ಮಾಡಿಕೊಳ್ಳಬೇಕು. ಭಯೋತ್ಪಾದನೆಯ ಗುಂಪುಗಳು ಅಫ್ಘಾನಿಸ್ತಾನದ ಮಣ್ಣನ್ನು ಭಯೋತ್ಪಾದನೆಗೆ ಬಳಸಿಕೊಳ್ಳುವುದಿಲ್ಲ ಎಂಬುದನ್ನು ಜಗತ್ತು ಖಚಿತಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರಿದ್ದು, ಅವರಿಗೆ ಸಹಾಯದ ಅಗತ್ಯವಿದೆ. ಅದನ್ನು ಪೂರೈಸುವ ಜವಾಬ್ದಾರಿ ನಮ್ಮದು ಎಂದು ಅಫ್ಘಾನಿಸ್ತಾನದ ಈಗಿನ ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ.
ಸಾಗರಗಳು ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗಿದೆ. ಯಾವುದೇ ಒಂದು ರಾಷ್ಟ್ರ ಸಾಗರದ ಮೇಲೆ ಅತಿಕ್ರಮಣ ಮಾಡುವ ಅಥವಾ ಸಾಗರದ ಮೇಲೆ ಪ್ರಾಬಲ್ಯ ಸಾಧಿಸುವ ನೀತಿಯಿಂದ ಸಾಗರಗಳನ್ನು ರಕ್ಷಿಸಬೇಕಿದೆ ಎಂದು ಮೋದಿ ಪರೋಕ್ಷವಾಗಿ ಚೀನಾಗೆ ಟಾಂಗ್ ನೀಡಿದರು.
ಇದನ್ನೂ ಓದಿ: "ಟೀ ಸ್ಟಾಲ್ನಲ್ಲಿ ತಂದೆಗೆ ಸಹಾಯ ಮಾಡ್ತಿದ್ದ ಪುಟ್ಟ ಬಾಲಕನಿಂದ ಇಂದು ವಿಶ್ವಸಂಸ್ಥೆಯಲ್ಲಿ ಭಾಷಣ": ನಮೋ