ಜಿನೀವಾ: ಕಳೆದ ಎಂಟು ತಿಂಗಳಿಂದ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ಯಾವಾಗ ಅಂತ್ಯವಾಗಲಿದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಡೆಡ್ಲೈನ್ ಕೊಟ್ಟಿದೆ.
ಪ್ರಸ್ತುತ ನಡೆಯುತ್ತಿರುವ ಜಾಗತಿಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಎರಡು ವರ್ಷಗಳಲ್ಲಿ ಮುಗಿಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಜಿನೀವಾದಿಂದ ವರ್ಚ್ಯುವಲ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಬ್ಲ್ಯುಎಚ್‌ಒ ಮುಖ್ಯಸ್ಥರು, 1918ರ ಸ್ಪ್ಯಾನಿಷ್ ಜ್ವರ ನಿವಾರಣೆಗೆ ಎರಡು ವರ್ಷಗಳು ತೆಗೆದುಕೊಳ್ಳಲಾಯಿತು. ಆದರೆ, ತಂತ್ರಜ್ಞಾನದಲ್ಲಿನ ಪ್ರಸ್ತುತ ಪ್ರಗತಿಗಳು ಕೋವಿಡ್ -19 ಸಾಂಕ್ರಾಮಿಕವನ್ನು ಅದಕ್ಕೂ ಕಡಿಮೆ ಸಮಯದಲ್ಲಿ ತಡೆಯುವಂತಹ ಸಾಮರ್ಥ್ಯ ಜಗತ್ತಿಗಿದೆ ಎಂಬ ವಿಶ್ವಾಸವನ್ನೂ ಇದೇ ವೇಳೆ ಅವರು ವ್ಯಕ್ತಪಡಿಸಿದ್ದಾರೆ
ಹೆಚ್ಚಿನ ಸಂಪರ್ಕದಿಂದಾಗಿ ವೈರಸ್ ಹರಡುವ ವ್ಯಾಪಕ ಅವಕಾಶವಿದೆ. ಅದೇ ಸಮಯದಲ್ಲಿ ಅದನ್ನು ತಡೆದು ನಿಲ್ಲಿಸುವಂತಹ ತಂತ್ರಜ್ಞಾನವೂ ನಮ್ಮಲ್ಲಿದೆ. ರಾಷ್ಟ್ರೀಯ ಏಕತೆ, ಜಾಗತಿಕ ಒಗ್ಗಟ್ಟು ಅತಿ ಮುಖ್ಯವಾಗಿದೆ ಎಂದು ಒತ್ತಿ ಹೇಳಿದರು.
ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಸಂಬಂಧಿಸಿದ ಭ್ರಷ್ಟಾಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟೆಡ್ರೊಸ್, ಇದನ್ನು 'ಕ್ರಿಮಿನಲ್' ಅಪರಾಧ ಎಂದು ಬಣ್ಣಿಸಿದ್ದಾರೆ. 'ಯಾವುದೇ ರೀತಿಯ ಭ್ರಷ್ಟಾಚಾರ ಸ್ವೀಕಾರಾರ್ಹವಲ್ಲ. ಪಿಪಿಇಗೆ ಸಂಬಂಧಿಸಿದ ಭ್ರಷ್ಟಾಚಾರ. ನನಗೆ ಇದು ನಿಜಕ್ಕೂ ಕೊಲೆಯಂತೆ ಕಾಣಿಸುತ್ತದೆ. ಏಕೆಂದರೆ ಆರೋಗ್ಯ ಕಾರ್ಯಕರ್ತರು ಪಿಪಿಇ ಇಲ್ಲದೇ ಕೆಲಸ ಮಾಡುತ್ತಿದ್ದರೆ. ನಾವು ಅವರ ಪ್ರಾಣವನ್ನು ಪಣಕ್ಕಿಡುತ್ತಿದ್ದೇವೆ. ಅದು ಅವರು ಸೇವೆ ಸಲ್ಲಿಸುತ್ತಿರುವ ಜನರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.