ಟೆಕ್ಸಾಸ್( ಅಮೆರಿಕ): ದಾಂಪತ್ಯ ಜೀವನವೇ ಒಂದು ಸುಖ - ದುಃಖದ ಅನುಭವ. ಸಾಂಸಾರಿಕ ಹಾದಿಯಲ್ಲಿ ಅನೇಕ ಕಷ್ಟ-ನೋವುಗಳು ಎದುರಾಗುವುದು ಸಹಜ. ಇಂತಹ ಹಾದಿಯಲ್ಲಿ ಯಶಸ್ವಿಯಾಗಿ 53 ವರ್ಷಗಳ ಕಾಲ ಪೂರ್ಣಗೊಳಿಸಿದ ವೃದ್ಧ ದಂಪತಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಈ ಮನ ಕಲುಕುವ ಘಟನೆ ನಡೆದಿದ್ದು ಇಲ್ಲೆಲ್ಲೂ ಅಲ್ಲ ದೂರದ ಅಮೆರಿಕಾದ ಟೆಕ್ಸಾಸ್ನಲ್ಲಿ.
ಏನಿದು ಘಟನೆ: ಬೆಟ್ಟಿ ಟಾರ್ಪ್ಲೆ (80) ಮತ್ತು ಕರ್ಟಿಸ್ ಟಾರ್ಪ್ಲೆ (79) ಬಾಲ್ಯದ ಗೆಳತಿ - ಗೆಳೆಯರು. ಇಲಿನಾಯ್ಸ್ನ ಹೈಸ್ಕೂಲ್ವೊಂದರಲ್ಲಿ ಪರಿಚಯವಾಗಿದ್ದ ಇವರು ಮುಂದೆ ಕ್ಯಾಲಿಫೋರ್ನಿಯಾದಲ್ಲಿ ಓದುತ್ತಿರುವಾಗ ಪ್ರೇಮಿಸಿ ರಿಂಗ್ ಬದಲಾಯಿಸಿಕೊಂಡು ಸುಖ ಸಂಸಾರದಲ್ಲಿ ತೇಲುತ್ತಿದ್ದರು.
ಅಲ್ಲಿಂದ ಇಲ್ಲಿವರೆಗೆ ಅಂದರೆ 53 ವರ್ಷಗಳ ಕಾಲ ಪ್ರಣಯದ ಹಕ್ಕಿಗಳಂತೆ ಜೀವನ ಸಾಗಿಸಿದ್ದರು. ಆದರೆ, ಇವರ ಸುಖ ಸಂಸಾರದ ಸುಂದರ ಬದುಕು ನೋಡಲಾಗದ ಕೊರೊನಾ ಇವರ ದೇಹವನ್ನ ಪ್ರವೇಶಿಸಿ ಬಿಟ್ಟಿತ್ತು. ಕಳೆದ ತಿಂಗಳು ಜೂನ್ 9 ರಂದು ಬೆಟ್ಟಿ ಟಾರ್ಪ್ಲೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಎರಡು ದಿನದ ಬಳಿಕ ಕರ್ಟಿಸ್ ಟಾರ್ಪ್ಲೆ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರಿಗೂ ಕೋವಿಡ್ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಜೂನ್ 18 ರಂದು ಇವರಿಬ್ಬರ ಸ್ಥಿತಿ ಚಿಂತಾಜನಕವಾಗಿತ್ತು. ಆಸ್ಪತ್ರೆ ಸಿಬ್ಬಂದಿ ಸಹಾಯದಿಂದ ಇವರಿಬ್ಬರು ಬದುಕಿನ ಕೊನೆ ಕ್ಷಣದ ಅನುಭವಗಳನ್ನು ಆನಂದಿಸಿದ್ದರು. ಸಾವಿಗೂ ಒಂದು ಗಂಟೆಯ ಅಂತರದಲ್ಲಿ ಒಬ್ಬರಿಗೊಬ್ಬರು ಕೈಹಿಡಿದು ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ.
ಅವರ ಪ್ರೀತಿಯನ್ನು ಬಣ್ಣಿಸಲು ಪದಗಳೇ ಸಾಲಲ್ಲ. ಒಬ್ಬರಿಗೊಬ್ಬರು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಜೀವನ ಸಾಗಿಸಿದ್ದರು. ನಮಗೆ ಯಾವುದೇ ರೀತಿಯ ತೊಂದರೆ ನೀಡದೆ ಸುಖವಾಗಿ ಬೆಳೆಸಿದ್ದಾರೆ ಎಂದು ಬೆಟ್ಟಿ ಮತ್ತು ಕರ್ಟಿಸ್ ಟಾರ್ಪ್ಲೆ ಮಗ ತಮ್ಮ ಭಾವನೆಗಳನ್ನು ಹಂಚಿಕೊಂಡು ದುಃಖ ವ್ಯಕ್ತಪಡಿಸಿದ್ದಾರೆ.