ವಾಷಿಂಗ್ಟನ್( ಅಮೆರಿಕ): ಉಯಿಘರ್ ಮಹಿಳೆಯರು ಅತ್ಯಾಚಾರ, ಚಿತ್ರಹಿಂಸೆ, ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ ಎಂದು ಖ್ಯಾತ ಉಯಿಘರ್ ಕಾರ್ಯಕರ್ತ ಮತ್ತು ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ಪ್ರದೇಶದ ವಕೀಲರೊಬ್ಬರು ಆರೋಪಿಸಿದ್ದಾರೆ.
"ಪೂರ್ವ ತುರ್ಕಿಸ್ತಾನ್‌ನ (ಕ್ಸಿನ್‌ಜಿಯಾಂಗ್) ಉಯಿಘರ್ ಮಹಿಳೆಯರನ್ನು ಅವರ ಜನಾಂಗೀಯತೆ ಮತ್ತು ಧರ್ಮದ ಕಾರಣದಿಂದಾಗಿ ಅಪರಾಧಿಗಳೆಂದು ಪರಿಗಣಿಸಲಾಗುತ್ತಿದೆ. ಅವರ ಸಂತಾನೋತ್ಪತ್ತಿ ಸಾಮರ್ಥ್ಯದಿಂದಾಗಿ ಅವರನ್ನು ಚೀನಾಕ್ಕೆ ಬೆದರಿಕೆಯೆಂದು ಪರಿಗಣಿಸಲಾಗಿದೆ" ಎಂದು ಉಯಿಘರ್ ಸಂಸ್ಥೆಯೊಂದರ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರುಶನ್ ಅಬ್ಬಾಸ್ ಹೇಳಿದ್ದಾರೆ.
"ಅವರು ಅತ್ಯಾಚಾರ, ಬಲವಂತದ ಸಂತಾನಹರಣ ಮತ್ತು ಗರ್ಭಪಾತ ಹಾಗೂ ಇತರ ರೀತಿಯ ಸಹಿಸಲಾಗದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದರೂ ಚೀನಾ ಸರ್ಕಾರ ಮತ್ತು ಜಗತ್ತು ಮೌನವಾಗಿದೆ ಎಂದು ಅವರು ಆರೋಪಿಸಿದ್ದಾರೆ.
"ಉಯಿಘರ್ ಮಹಿಳೆಯರು ಮಕ್ಕಳಿಗೆ ಜನ್ಮ ನೀಡುವುದನ್ನು ನಿಷೇಧಿಸಲಾಗಿರುವುದರಿಂದ, ಲಕ್ಷಾಂತರ ಉಯಿಘರ್ಗಳು ಸರ್ಕಾರದ ಕ್ಯಾಂಪ್‌ಗಳಲ್ಲಿ ನರಳುತ್ತಿದ್ದಾರೆ. ಹಲವರನ್ನು ಒತ್ತಾಯಪೂರ್ವಕವಾಗಿ ಕಾರ್ಖಾನೆಯ ಉದ್ಯೋಗಗಳಿಗೆ ಕಳುಹಿಸಲಾಗುತ್ತಿದ್ದು, ಅಲ್ಲಿ ಅವರು ಗುಲಾಮರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಂದಿರನ್ನು ತಮ್ಮ ಮಕ್ಕಳಿಂದ ಬಲವಂತವಾಗಿ ಬೇರ್ಪಡಿಸಲಾಗುತ್ತದೆ. ಮಕ್ಕಳ ಪೋಷಕರು ಸರ್ಕಾರದ ಕ್ಯಾಂಪ್‌ಗಳಲ್ಲಿ ಮತ್ತು ಮಕ್ಕಳ ಸರ್ಕಾರದ ಅನಾಥಾಶ್ರಮಗಳಲ್ಲಿದ್ದಾರೆ" ಎಂದು ಹೇಳಿದರು.
"ಉಯಿಘರ್ ಮಹಿಳೆಯರನ್ನು ಚೀನಾದ ಪುರುಷರೊಂದಿಗೆ ವಿವಾಹವಾಗಲು ಒತ್ತಾಯಿಸಲಾಗುತ್ತಿದೆ. ಈ ವಿವಾಹವನ್ನು ತಿರಸ್ಕರಿಸಲು ಮಹಿಳೆಯರು ಭಯಪಡುತ್ತಾರೆ" ಎಂದು ಅವರು ಆರೋಪಿಸಿದರು.