ವಾಷಿಂಗ್ಟನ್: ಕೊರೊನಾ ವೈರಸ್ ಮೂಲದ ಕುರಿತು ತನಿಖೆ ನಡೆಸಲು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಅಥವಾ ಚೀನಾದ ಯಾವುದೇ ಭಾಗಕ್ಕೆ ಭೇಟಿ ನೀಡಲು, ಅಮೆರಿಕದ ವಿಜ್ಞಾನಿಗಳಿಗೆ ಬೀಜಿಂಗ್ ಅನುಮತಿ ನಿರಾಕರಿಸಿದೆ.
ಈ ವೈರಸ್ಗೆ ಸಂಬಂಧಿಸಿದಂತೆ ಕ್ಸಿ ಜಿನ್‌ಪಿಂಗ್ ಸರ್ಕಾರದಿಂದ ಹೆಚ್ಚಿನ ಪಾರದರ್ಶಕತೆ ಏಕೆ ಬೇಕು ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬುಧವಾರ ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡುತ್ತಾ ಈ ವಿಷಯ ಬಹಿರಂಗಪಡಿಸಿದರು.
ಚೀನಾ ಸರ್ಕಾರವು ಅಮೆರಿಕಾದ ವಿಜ್ಞಾನಿಗಳು ಚೀನಾಕ್ಕಾಗಲಿ, ವುಹಾನ್ ಲ್ಯಾಬ್‌ಗಾಗಲಿ, ಈ ವೈರಸ್ ಬಗ್ಗೆ ತಿಳಿಯಲು, ಅದರ ಮೂಲದ ಬಗ್ಗೆ ತಿಳಿಯಲು ಎಲ್ಲಿಗೂ ಹೋಗಲು ಅನುಮತಿ ನೀಡಿಲ್ಲ ಎಂದು ಪೊಂಪಿಯೊ ಸುದ್ದಿ ವಾಹಿನಿಗೆ ಸ್ಪಷ್ಟಪಡಿಸಿದ್ದಾರೆ.
ಈ ವೈರಸ್ ಕುರಿತ ಸಂತ್ಯಾಂಶವನ್ನು ತಿಳಿಯುವುದು ವಿಶ್ವ ಆರೋಗ್ಯ ಸಂಸ್ಥೆಯ ಜವಾಬ್ದಾರಿಯಾಗಿದೆ. ಅವರು ಅದನ್ನು ಮಾಡುತ್ತಿಲ್ಲ. ಇತರ ದೇಶಗಳು ವಿಶ್ವಸಂಸ್ಥೆಯ ವೈಫಲ್ಯಗಳನ್ನು ಗುರುತಿಸಲು ಪ್ರಾರಂಭಿಸಿವೆ ಎಂದರು.