ರಿಯೋ ಡಿ ಜನೈರೊ (ಬ್ರೆಜಿಲ್): ಮಾದಕವಸ್ತು ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡು ಪೊಲೀಸರು ಬ್ರೆಜಿಲ್‌ನ ರಿಯೋ ಡಿ ಜನೈರೊದ ಕೊಳೆಗೇರಿ ಪ್ರದೇಶದ ಮೇಲೆ ದಾಳಿ ನಡೆಸಿದ್ದು, ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಅಧಿಕಾರಿ ಹಾಗೂ 24 ಡ್ರಗ್ ಆರೋಪಿಗಳು ಮೃತಪಟ್ಟಿದ್ದಾರೆ.
ಶಸ್ತ್ರಸಜ್ಜಿತ ಆರೋಪಿಗಳು, ಪೊಲೀಸರು ಜಕರೆಜಿನ್ಹೋ ಸ್ಲಮ್ನ ಗಲ್ಲಿ ಗಲ್ಲಿಗಳಲ್ಲಿ, ಸಿಕ್ಕಿ ಸಿಕ್ಕ ಮನೆ ಮನೆಯೊಳಗೆ ಓಡಿದ್ದು, ಇವರನ್ನು ಬೆನ್ನತ್ತಿದ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಗಳು ಪೊಲೀಸ್ ಅಧಿಕಾರಿಗಳ ಪ್ರಾಣ ತೆಗೆಯಲು ಪ್ರಯತ್ನಿಸಿದ್ದು, ಬೇರೆ ದಾರಿಯಿಲ್ಲದೇ ಶೂಟ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ದಾಳಿ ವೇಳೆ 16 ಪಿಸ್ತೂಲ್‌ಗಳು, 6 ರೈಫಲ್‌ಗಳು, ಒಂದು ಸಬ್‌ಮಷಿನ್ ಗನ್, 12 ಗ್ರೆನೇಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಕರೆಜಿನ್ಹೋ- ಇದು ಸುಮಾರು 40,000 ನಿವಾಸಿಗಳಿರುವ ಕೊಳೆಗೇರಿ ಪ್ರದೇಶವಾಗಿದ್ದು, ಬ್ರೆಜಿಲ್‌ನ ಪ್ರಮುಖ ಅಪರಾಧ ಸಂಸ್ಥೆಗಳಲ್ಲಿ ಒಂದಾದ ಕಮಾಂಡೋ ವರ್ಮೆಲ್ಹೋ ಪ್ರಾಬಲ್ಯ ಹೊಂದಿದೆ. ಈ ಗುಂಪಿನ ಪ್ರಧಾನಿ ಕಚೇರಿಗಳಲ್ಲಿ ಜಕರೆಜಿನ್ಹೋ ಕೂಡ ಒಂದಾಗಿದೆ ಎಂದು ಪೊಲೀಸರು ಹೇಳುತ್ತಾರೆ.
ರೈಲುಗಳನ್ನು ಹೈಜಾಕ್ ಮಾಡಿ, ಅಪರಾಧ ಚಟುವಟಿಕೆಗಳಿಗೆ ದೂಡಲು ಹದಿಹರೆಯದವರನ್ನು ಮಾದಕವಸ್ತು ಕಳ್ಳಸಾಗಣೆದಾರ ನೇಮಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ಪ್ರದೇಶದಲ್ಲಿ ನಿನ್ನೆ ಮಾನವ ಹಕ್ಕುಗಳ ಆಯೋಗದ ಸದಸ್ಯರೊಂದಿಗೆ ಬಂದು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಮಧ್ಯಾಹ್ನದ ವೇಳಗೆ ಸುಮಾರು 50 ಜನರ ಗುಂಪು ನಮಗೆ ನ್ಯಾಯ ಬೇಕೆಂದು ಘೋಷಣೆ ಕೂಗಲು ಶುರು ಮಾಡಿದ್ದಾರೆ. ಕೆಲವರು ಶಸ್ತ್ರಸಜ್ಜಿತರಾಗಿ ದಾಳಿಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.