ರಿಯೋ ಡಿ ಜನೈರೊ(ಬ್ರೆಜಿಲ್): ಕೋವಿಡ್-19 ನಿಂದ ರಾಷ್ಟ್ರವ್ಯಾಪಿ ಸಾವಿನ ಸಂಖ್ಯೆ 5 ಲಕ್ಷದ ಗಡಿ ದಾಟಿದ್ದು, ಸರ್ಕಾರ ವಿರೋಧಿ ಪ್ರತಿಭಟನಾಕಾರರು, ಶನಿವಾರ ಬ್ರೆಜಿಲ್ನಾದ್ಯಂತ ಹೆಚ್ಚಿನ ನಗರಗಳಲ್ಲಿ ಬೀದಿಗಿಳಿದಿದ್ದರು.
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು. ಡೌನ್ಟೌನ್ ರಿಯೊ ಡಿ ಜನೈರೊದಲ್ಲಿ ಸಾವಿರಾರು ಜನರು "ಗೆಟ್ ಔಟ್ ಬೋಲ್ಸನಾರೊ" ಎಂಬ ಘೋಷಣೆ ಕೂಗಿದರು.
ಬ್ರೆಜಿಲ್ ದೊಡ್ಡ ಹಿನ್ನಡೆ ಅನುಭವಿಸುತ್ತಿದೆ. ವಿಶ್ವದಲ್ಲಿ ಲಸಿಕೆ ನೀಡಲು ದೇಶವು ಅನುಕರಣೀಯ ದೇಶವಾಗಿತ್ತು. ನಾವು ವ್ಯಾಪಕವಾಗಿ ಗುರುತಿಸಲ್ಪಟ್ಟ ಸಂಸ್ಥೆಗಳನ್ನು ಹೊಂದಿದ್ದೇವೆ. ಆದರೆ ಇಂದು ನಾವು ದುಃಖದ ಪರಿಸ್ಥಿತಿಯಲ್ಲಿದ್ದೇವೆ ಎಂದು ರಿಯೊದಲ್ಲಿ ಪ್ರತಿಭಟನೆಯಲ್ಲಿ ಸೇರಿಕೊಂಡ 20 ವರ್ಷದ ಇಸಾಬೆಲಾ ಗೌಲ್ಜೋರ್ ಹೇಳಿದರು.
5 ಲಕ್ಷ ಜನ ಕೊರೊನಾಗೆ ಬಲಿಯಾಗಿರುವುದು ಅಧಕ್ಷರ ತಪ್ಪಿನಿಂದ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ. ಫೆಡರಲ್ ಡಿಸ್ಟ್ರಿಕ್ಟ್, ಬ್ರೆಸಿಲಿಯಾದಲ್ಲಿ ಸಹ ಬೋಲ್ಸನಾರೊ ಆಡಳಿತದ ವಿರುದ್ಧ ಮೆರವಣಿಗೆಗಳು ನಡೆದವು.