ಕೊಕ್ವಿಂಬೊ: ಜಗತ್ತಿನಾದ್ಯಂತ ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ಭಯ ಶುರುವಾಗಿದೆ. ಈ ಬೆನ್ನಲ್ಲೇ ಎಂಎಸ್ ಮರೀನಾ ಕ್ರೂಸ್ ಹಡಗಿನಲ್ಲಿ ಪ್ರಯಾಣಿಕರೊಬ್ಬರಿಗೆ ಶನಿವಾರ ಕೋವಿಡ್-19 ವೈರಸ್ ದೃಢಪಟ್ಟಿದ್ದು, ಹಡಗಿನಲ್ಲಿ ಪ್ರಯಾಣಿಸಿದ ಇತರರಲ್ಲಿ ಆತಂಕ ಮನೆಮಾಡಿದೆ.
ಶುಕ್ರವಾರ ಪನಾಮದಿಂದ ಉತ್ತರ ಚಿಲಿಗೆ ಕ್ರೂಸ್ ಆಗಮಿಸುತ್ತಿದ್ದಂತೆ ಹಡಗಿನಲ್ಲಿದ್ದ ಎಲ್ಲಾ 1,050 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಚಿಲಿಯಾನ್ ಆರೋಗ್ಯ ಅಧಿಕಾರಿಗಳು ಕೋವಿಡ್-19 ಪರೀಕ್ಷೆ ನಡೆಸಿದರು. ಈ ವೇಳೆ ಓರ್ವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದ ಇಬ್ಬರಿಗೆ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ, ಆರೋಗ್ಯ ಉತ್ತಮವಾಗಿದೆ ಎಂದು ಚಿಲಿಯಾನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಪ್ರಕರಣ ದೃಢಪಟ್ಟ ಹಿನ್ನೆಲೆ ಕೊಕ್ವಿಂಬೊ ನಿವಾಸಿಗಳಲ್ಲಿ ಆತಂಕ ಮನೆಮಾಡಿದ್ದು, ವೈರಸ್ ಹರಡುವ ಭೀತಿ ಎದುರಾಗಿದೆ.