ಕೆನೋಶಾ: ಅಮೆರಿಕದ ವಿಸ್ಕಾನ್ಸಿನ್ ಎಂಬ ರಾಜ್ಯದಲ್ಲಿ ಆಫ್ರಿಕನ್ ಅಮೆರಿಕನ್ ವ್ಯಕ್ತಿಯಾದ ಜಾಕೋಬ್ ಬ್ಲೇಕ್ ಎಂಬಾತನ ಮೇಲೆ ಪೊಲೀಸರು ವಿನಾಕಾರಣ ಗುಂಡಿನ ದಾಳಿ ನಡೆಸಿದ್ದರು. ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಅಮೆರಿಕದ ಅನೇಕ ನಗರಗಳಲ್ಲಿ ಕಪ್ಪು ವರ್ಣಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆನೋಶಾ ನಗರದ ಕೋರ್ಟ್ಹೌಸ್ನ ಮೈದಾನದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಗುಂಡಿನ ದಾಳಿ ನಡೆದಿತ್ತು. ಈ ದಾಳಿ ಸಂಬಂಧ ಪೊಲೀಸರು 17 ವರ್ಷದ ಬಾಲಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಮಂಗಳವಾರ ರಾತ್ರಿ 11.45ರ ಸುಮಾರಿಗೆ ಪ್ರತಿಭಟನೆ ನಿರತರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದನು. ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆನೋಶ್ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಬ್ಲೇಕ್ ಜೀವನವನ್ನೇ ಬರ್ಬಾದ್ ಮಾಡಿದ ಪೊಲೀಸರ ಗುಂಡು: ಎದ್ದು ನಡೆಯಲಾರದ ಸ್ಥಿತಿಯಲ್ಲಿ ಜಾಕೋಬ್
ಇನ್ನು ಈ ದಾಳಿ ಸಂಬಂಧ ವಿಡಿಯೋವೊಂದು ಲಭ್ಯವಾಗಿದೆ. ವಿಡಿಯೋ ಆಧಾರದ ಮೇಲೆ ಬಾಲಕನನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಜಾಕೋಬ್ ಬ್ಲೇಕ್ ಎಂಬಾತನ ಮೇಲೆ ನಡೆದ ಗುಂಡಿನ ದಾಳಿಯ ವಿಡಿಯೋ ಸೆರೆಹಿಡಿಯಲಾಗಿದ್ದು, ಕೆನೋಶಾ ಪೊಲೀಸರು ಆತನನ್ನು ಸುತ್ತುವರಿದು ಕಾರಿನ ಬಳಿ ಕರೆತಂದು ಏಳು ಬಾರಿ ಆತನ ಬೆನ್ನಿಗೆ ಗುಂಡು ಹಾರಿಸಿರುವುದು ವಿಡಿಯೋದಲ್ಲಿ ಗೋಚರವಾಗಿದೆ. ಪೊಲೀಸರ ಈ ಅಮಾನವೀಯ ಕೃತ್ಯ ಸಹಿಸಲು ಅಸಾಧ್ಯ, ಬ್ಲೇಕ್ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಈ ಕೂಡಲೇ ಬಂಧಿಸಬೇಕು ಎಂದು ಬ್ಲೇಕ್ ಪರ ವಕೀಲರು ಹಾಗೂ ಆತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಬ್ಲೇಕ್ ಮೇಲೆ ನಡೆದ ಗುಂಡಿನ ದಾಳಿ ನಂತರ ವಿಸ್ಕಾನ್ಸಿನ್ ಸೇರಿದಂತೆ ಅಮೆರಿಕದ ಹಲವಾರು ನಗರಗಳಲ್ಲಿ ಜನಾಂಗೀಯ ಅನ್ಯಾಯದ ಬಗ್ಗೆ ಪ್ರತಿಭಟನೆಗಳು ನಡೆದಿದ್ದು, ಅವುಗಳಲ್ಲಿ ಕೆಲವು ಅಶಾಂತಿಗೆ ಕಾರಣವಾಗಿವೆ. ಮಿನ್ನಿಯಾ ಪೊಲೀಸರ ಕೈಯಲ್ಲಿ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ ಕೇವಲ ಮೂರು ತಿಂಗಳ ಬಳಿಕ ಈ ದುರ್ಘಟನೆ ಸಂಭವಿಸಿದ್ದು, ಕಪ್ಪು ವರ್ಣೀಯರ ಮೇಲಾಗುತ್ತಿರುವ ಶೋಷಣೆ ವಿರುದ್ಧ ಅಮೆರಿಕನ್ನರು ತಿರುಗಿ ಬಿದ್ದಿದ್ದಾರೆ.
ಪ್ರತಿಭಟನಾಕಾರರು ಪೊಲೀಸ್ ಇಲಾಖೆಯ ಮೇಲೆ ಕೆಂಡ ಕಾರತೊಡಗಿದ್ದು, ನಗರದಲ್ಲಿನ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, 12ಕ್ಕೂ ಅಧಿಕ ಕಟ್ಟಡಗಳು ಪ್ರತಿಭಟನಾಕಾರರ ಕೋಪಕ್ಕೆ ಬಲಿಯಾಗಿವೆ.