ಅಬುಧಾಬಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಯುಎಇ ಭೇಟಿಯಲ್ಲಿದ್ದು, ಅಲ್ಲಿನ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಜೊತೆ ಕೋವಿಡ್ ನಂತರದ ಸಮಯದ ಕುರಿತು ಚರ್ಚೆ ನಡೆಸಿದ್ದಾರೆ.
ಉಭಯ ನಾಯಕರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮಂಗಳವಾರ ಆರಂಭವಾದ ಬಹ್ರೇನ್, ಯುಎಇ, ಸೀಶೆಲ್ಸ್ ದೇಶಗಳ ಜೈಶಂಕರ್ ಅವರ 6 ದಿನದ ಪ್ರವಾಸದ 2ನೇ ಹಂತವಾಗಿ ಬುಧವಾರ ರಾತ್ರಿ ಯುಎಇ ಬಂದಿಳಿದಿದ್ದಾರೆ. ಕೋವಿಡ್ನಿಂದ ಹಾನಿಗೀಡಾಗಿರುವ ದೇಶಗಳ ಪರಿಸ್ಥಿತಿಯ ನಡುವೆ ಈ ಭೇಟಿ ಪ್ರಾಮುಖ್ಯತೆ ಪಡೆದಿದೆ.
ಯುಎಇ ಪ್ರವಾಸ ಕುರಿತು ಟ್ವೀಟ್ ಮಾಡಿರುವ ಜೈಶಂಕರ್, ’’ನನ್ನನ್ನು ಅಬುಧಾಬಿಗೆ ಸ್ವಾಗತಿಸಿದಕ್ಕಾಗಿ ನಿಮಗೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿಯವರು ನಿಮಗೆ ಶುಭಹಾರೈಸಿದ್ದಾರೆ’’ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಇನ್ನು ನವೆಂಬರ್ 27ರಂದು ಜೈಶಂಕರ್ ಸೀಶಲ್ಸ್ ದೇಶಕ್ಕೆ ಭೇಟಿ ನೀಡಲಿದ್ದಾರೆ.
ಅಬುಧಾಬಿಯ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಯುಎಇಯಲ್ಲಿ ಸುಮಾರು 30.4 ಲಕ್ಷದಷ್ಟು ಭಾರತೀಯ ವಲಸಿಗರಿದ್ದು, ಯುಎಇಯ ಅತಿದೊಡ್ಡ ಜನಾಂಗೀಯ ಸಮುದಾಯ ಎನಿಸಿಕೊಂಡಿದೆ.
ಯುಎಇಯಲ್ಲಿ ಭಾರತದ ರಾಜ್ಯಗಳಾದ ಕೇರಳದಿಂದ ಅತೀ ಹೆಚ್ಚು ವಲಸಿಗರು ತೆರಳಿದರೆ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ನಂತರದ ಸ್ಥಾನದಲ್ಲಿವೆ.