ಮೊಗದಿಶು, ಸೊಮಾಲಿಯಾ: ಸೆಂಟ್ರಲ್ ಸೋಮಾಲಿಯಾದ ಸೊಮಾಲಿ ರಾಷ್ಟ್ರೀಯ ಸೇನೆ (SNA) ಮತ್ತು ಅರೆ ಸೈನಿಕ ಪಡೆಗಳು ಅಲ್ಲಿನ ಪ್ರಾದೇಶಿಕ ಪಡೆಯೊಂದರ ನಡುವೆ ಘರ್ಷಣೆಗೆ ಇಳಿದ ಪರಿಣಾಮ ಸುಮಾರು 20 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಲ್ಮುದುಗ್ ರಾಜ್ಯದಲ್ಲಿ ಸಂಘರ್ಷ ನಡೆದಿದ್ದು, ಅಲ್ಲಿನ ಗುರಿಯಲ್ ನಗರದ ಹೊರವಲಯದಲ್ಲಿ ಅಹ್ಲು ಸುನ್ನ ವಲ್ಜಾಮಾ (ASWJ) ಎಂಬ ಇಸ್ಲಾಮಿಕ್ ಗುಂಪೊಂದು ಸೋಮಲಿ ರಾಷ್ಟ್ರೀಯ ಸೇನೆ ಮತ್ತು ಅರೆ ಸೇನಾ ಪಡೆಗಳ ಮೇಲೆ ದಾಳಿ ಮಾಡಿದ ವೇಳೆ ಸಂಘರ್ಷ ಭುಗಿಲೆದ್ದಿದೆ ಎಂದು ಗಾಲ್ಮುದುಗ್ ವಾರ್ತಾ ಸಚಿವ ಅಹ್ಮದ್ ಶೈರ್ ಫಲಾಗ್ಲೆ ಅವರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಅಹ್ಲು ಸುನ್ನ ವಲ್ಜಾಮಾ ಸೇನೆಯೊಂದಿಗಿನ ಭೀಕರ ಹೋರಾಟದಲ್ಲಿ ಎಸ್‌ಎನ್‌ಎ ವಿಶೇಷ ಪಡೆಗಳ ಘಟಕದ ಕಮಾಂಡರ್ ಅಬ್ಡಿಲಾಡಿಫ್ ಫೈಲೆ ಸೇರಿದಂತೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಫಲಾಗ್ಲೆ ಕ್ಸಿನ್ಹುವಾ ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ. ಈಗ ಸೊಮಾಲಿ ರಾಷ್ಟ್ರೀಯ ಸೇನೆ ಮತ್ತು ಅರೆ ಸೈನಿಕ ಪಡೆಗಳು ನಗರದ ಮೇಲೆ ನಿಯಂತ್ರಣ ಸಾಧಿಸಿವೆ. ಇದರ ಜೊತೆಗೆ ಅಹ್ಲು ಸುನ್ನ ವಲ್ಜಾಮಾದ ಕೆಲವು ಸೈನಿಕರನ್ನು ಸೆರೆ ಹಿಡಿಯಲಾಗಿದೆ. ಮೂವರು ಸೈನಿಕರನ್ನು ನಾವು ಕಳೆದುಕೊಂಡಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಫಲಾಗ್ಲೆ ಮಾಹಿತಿ ನೀಡಿದ್ದಾರೆ.
ದಾಳಿಯಿಂದಾಗಿ ನಗರದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಕೆಲವರು ನಗರದಿಂದ ಪಲಾಯನ ಮಾಡಿದ್ದಾರೆ. ಅವರು ನಗರಕ್ಕೆ ಮರಳಲು ಸಾಧ್ಯವಾಗುವಂತೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಫಲಾಗ್ಲೆ ಹೇಳಿದ್ದಾರೆ.
ಮನೆಗಳ ಮೇಲೆ ದಾಳಿ ನಡೆಯುತ್ತಿದೆ. ಹೆಚ್ಚಿನ ಮಂದಿ ಮನೆಗಳನ್ನು ತೊರೆದು ಬೇರೆಡೆಗೆ ಹೋಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಫೋನ್ನಲ್ಲಿ ಹೇಳಿದ್ದಾರೆ ಎಂದು ಕ್ಸಿನ್ಹುವಾ ಉಲ್ಲೇಖಿಸಿದೆ. ಈ ನಗರದಲ್ಲಿ ಉಳಿದುಕೊಂಡ ಕೆಲವೇ ಕೆಲವು ಮಂದಿಯಲ್ಲಿ ನಾನೂ ಕೂಡಾ ಒಬ್ಬನಾಗಿದ್ದೆನು. ಖಾಲಿ ಮನೆಗಳ ಮೇಲೆ ಶೆಲ್ಗಳ ದಾಳಿ ನಡೆಯುತ್ತಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಕೆಲವೊಂದು ಮೂಲಗಳು ಹೇಳುವಂತೆ ಎರಡೂ ಕಡೆಯವರೂ ಸೇರಿದಂತೆ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಅಹ್ಲು ಸುನ್ನ ವಲ್ಜಾಮಾ ಗುಂಪಿನ ಕಡೆಯವರೇ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಗುರಿಯಲ್ ಪಟ್ಟಣದಿಂದ ಪಲಾಯನ ಮಾಡಿದ್ದಾರೆಂದು ವಿಶ್ವಸಂಸ್ಥೆ ಹೇಳಿದೆ.
ಇದನ್ನೂ ಓದಿ: ಆಫ್ಘನ್ನಲ್ಲಿ ವಾಯು ಕಾರ್ಯಾಚರಣೆ ನಡೆಸಲು ಅಮೆರಿಕದೊಂದಿಗೆ ಒಪ್ಪಂದ ವಿಚಾರ : ವರದಿ ತಿರಸ್ಕರಿಸಿದ ಪಾಕ್