ಸಾಹೇಲ್(ಬುರ್ಕಿನಾ ಫಾಸೊ): ಬುರ್ಕಿನಾ ಫಾಸೊದ ಉತ್ತರ ಸಹೇಲ್ ಪ್ರದೇಶದಲ್ಲಿ ಬುಧವಾರ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ 30 ನಾಗರಿಕರು, 14 ಸೈನಿಕರು ಮತ್ತು 3 ಸೇನಾ ಸಹಾಯಕ ಸದಸ್ಯರು ಸೇರಿದಂತೆ 47 ಜನರು ಸಾವನ್ನಪ್ಪಿದ್ದಾರೆ ಎಂದು ಸೇನೆ ಅಧಿಕೃತ ಹೇಳಿಕೆ ಬುಧವಾರ ತಿಳಿಸಿದೆ.
ಇನ್ನು "ಸಶಸ್ತ್ರ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 58 ಭಯೋತ್ಪಾದಕರು ಹತರಾದರು ಮತ್ತು ಹಲವಾರು ಮಂದಿ ಗಾಯಗೊಂಡು ಪರಾರಿಯಾಗಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೇನೆ ಎನ್ಕೌಂಟರ್ ನಡೆಸಿದರೂ ಸಹ 30 ನಾಗರಿಕರು ಪ್ರಾಣ ಕಳೆದುಕೊಂಡರು ಮತ್ತು ಇತರ 19 ಮಂದಿ ಗಾಯಗೊಂಡರು ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಘಟನೆ ಸಶಸ್ತ್ರ ಪಡೆಗಳ 14 ಸದಸ್ಯರು ಮತ್ತು ಮೂವರು ವಿಡಿಪಿ ಸದಸ್ಯರ ಜೀವವನ್ನು ಬಲಿ ತೆಗೆದುಕೊಂಡಿತು ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬುರ್ಕಿನಾ ಫಾಸೊದಲ್ಲಿ ಭದ್ರತಾ ವ್ಯವಸ್ಥೆ 2015 ರಿಂದ ತೀವ್ರ ಹದಗೆಟ್ಟಿದೆ, ಭಯೋತ್ಪಾದಕ ದಾಳಿಯು 1,000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಉಗ್ರರ ಅಟ್ಟಹಾಸದ ಹಿನ್ನೆಲೆ ಒಂದು ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿದೆ.