ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡ್ತಿದೆ. ಅದ್ರಲ್ಲೂ ಗ್ರಾಮೀಣ ಭಾಗದಲ್ಲಂತೂ ಕೊರೊನಾದ ಹೊಡೆತಕ್ಕೆ ಜನರು ತತ್ತರಿಸಿದ್ದಾರೆ.
ಈ ಮಧ್ಯದಲ್ಲಿ ಮೋಜು-ಮಸ್ತಿ ಮಾಡೋಕೆ ಅದೇ ಹಳ್ಳಿಗಳಿಗೆ ಬುದ್ಧಿವಂತರು ಅಂತ ಕರೆಯಿಸಿಕೊಂಡಿರುವ ಅಧಿಕಾರಿಗಳು ಹೋಗಿದ್ದಾರೆ. ಈ ವೇಳೆ ಸರಿಯಾಗಿಯೇ ಮಂಗಳಾರತಿ ಎತ್ತಿ ಅಧಿಕಾರಿಗಳನ್ನ ಘೇರಾವ್ ಹಾಕಿ ಜನರು ವಾಪಸ್ ಕಳುಹಿಸಿದ್ದಾರೆ.
ನಗರದಲ್ಲಿ ಟ್ರಾಫಿಕ್ ಜಾಮ್ ಆದಂತೆ ಉದ್ದುದ್ದ ನಿಂತಿರುವ ಕಾರುಗಳು. ಕಾರಿನಿಂದ ಇಳಿದು ಬಂದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು.
ಈ ದೃಶ್ಯ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದಲ್ಲಿ. ಅಷ್ಟಕ್ಕೂ ಇವರು ಲೋಕಲ್ ಅಧಿಕಾರಿಗಳು ಅಲ್ಲ, ಬದಲಾಗಿ ರಾಜ್ಯ ಮಟ್ಟದ ಹೈಫೈ ಆಫೀಸರ್ಸ್ ದಂಡು.
ಕಾಫಿನಾಡಿನಲ್ಲಿ ಜನರು ಕೊರೊನಾದಿಂದ ವಿಲವಿಲ ಅಂತಾ ಒದ್ದಾಟ ನಡೆಸುತ್ತಿರುವ ಸಂದರ್ಭದಲ್ಲಿ, ಅರಣ್ಯ ಅಧಿಕಾರಿಗಳ ಗ್ಯಾಂಗ್ ಮೋಜು ಮಸ್ತಿಗೆ ಸಂತವೇರಿ ಗ್ರಾಮದ ಕಡೆ ಪಯಣ ಬೆಳೆಸಿದೆ. ಅಧಿಕಾರಿಗಳ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯರು, ಗ್ರಾಮಕ್ಕೆ ಬಂದ ಕಾರುಗಳನ್ನ ತಡೆದಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ರಾಜ್ಯ ಅರಣ್ಯ ಪಡೆ ಮುಖ್ಯಸ್ಥ, ಸಿಸಿಎಫ್, ಡಿಎಫ್ಒ ಸೇರಿದಂತೆ ಎಸಿಎಫ್, ಆರ್ಎಫ್ಒಗಳು ಸಂತವೇರಿ ಸಮೀಪದ ಗೇಟ್ ಫಾರೆಸ್ಟ್ಗೆ ಹೊರಟಿದ್ದಾಗ ಸ್ಥಳೀಯರು ತಡೆದಿದ್ದಾರೆ.
ಈ ವೇಳೆ “ನಾವುಗಳು ಕೊರೊನಾ ಸಂಕಷ್ಟದಲ್ಲಿರುವಾಗ ನಿಮಗೆ ಮೋಜು-ಮಸ್ತಿ ಬೇಕಾ” ಅಂತ ಅಧಿಕಾರಿಗಳನ್ನ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂದು ಹತ್ತಕ್ಕೂ ಹೆಚ್ಚು ಕಾರುಗಳನ್ನ ಯೂ ಟರ್ನ್ ಮಾಡಿ ಅಧಿಕಾರಿಗಳ ತಂಡ ಅಲ್ಲಿಂದ ಕಾಲ್ಕಿತ್ತಿದೆ.
ಈ ಘಟನೆ ನಡೆದಿದ್ದು ನಿನ್ನೆ ಮಧ್ಯಾಹ್ನ. ಸಂತವೇರಿ ಸಮೀಪದ ಗೇಮ್ ಫಾರೆಸ್ಟ್ ಎಂಬ ಪ್ರದೇಶಕ್ಕೆ ಹೋಗುವಾಗ ಸ್ಥಳೀಯರಿಗೆ ಗಮನಕ್ಕೆ ಬಂದು ದೊಡ್ಡ ಹೈಡ್ರಾಮಾ ನಡೆದಿದೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಲೇ ಸ್ಥಳೀಯರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅರಣ್ಯ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.