ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ತೆರೆ ಎಳೆಯಲು ಬುಧವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದು, ಸಚಿವರ ಸಭೆ ಕರೆದಿದ್ದಾರೆ. ಸಭೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೂ ಆಹ್ವಾನ ನೀಡಲಾಗಿದೆ.
ಬುಧವಾರ ಸಂಜೆ 5 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಅರುಣ್ ಸಿಂಗ್ ಸಚಿವರ ಸಭೆ ಕರೆದಿದ್ದಾರೆ. ಸಿಎಂ ಯಡಿಯೂರಪ್ಪ, ಕಟೀಲ್ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ರಾಜ್ಯ ಬಿಜೆಪಿಯಲ್ಲಿ ತಲೆದೂರಿರುವ ಗೊಂದಲ, ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಶಾಸಕರ ಸಮಸ್ಯೆಗಳಿಗೆ ಸಚಿವರು ಸ್ಪಂದಿಸುತ್ತಿಲ್ಲ ಎನ್ನುವ ಆರೋಪದ ಕುರಿತು ಚರ್ಚೆ ನಡೆಸಲಾಗುತ್ತದೆ. ಸಚಿವರ ಕಾರ್ಯವೈಖರಿ, ಸಾಧನೆ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸಚಿವರ ಸಭೆ ನಂತರ ಶಾಸಕರ ಸಭೆ ನಡೆಯಲಿದ್ದು, ಗುರುವಾರ ಬೆಳಗ್ಗೆ ಆಯ್ದ ಶಾಸಕರನ್ನು ಒಬ್ಬೊಬ್ಬರಾಗಿ ಪ್ರತ್ಯೇಕವಾಗಿ ಕರೆಸಿಕೊಂಡು ಸಮಸ್ಯೆ ಆಲಿಸಿ ಚರ್ಚೆ ನಡೆಸಲಿದ್ದಾರೆ. ಸಿಎಂ ಪರ, ವಿರೋಧ ಬಣಗಳ ಶಾಸಕರ ಜೊತೆ ಅರುಣ್ ಸಿಂಗ್ ಮಾತುಕತೆ ನಡೆಸಲಿದ್ದಾರೆ.
ಆಡಳಿತದಲ್ಲಿ ಮುಖ್ಯಮಂತ್ರಿಗಳ ಕುಟುಂಬದ ಹಸ್ತಕ್ಷೇಪ ಹೆಚ್ಚಾಗಿದೆ. ಶಾಸಕರು ಸಚಿವರ ನಡುವೆ ಸಮನ್ವಯತೆ ಕೊರತೆ ಇದೆ, ಅನುದಾನ ಹಂಚಿಕೆ ಸರಿಯಾಗಿ ಆಗುತ್ತಿಲ್ಲ, ತಮ್ಮ ಸುತ್ತ ಇರುವ ಆಪ್ತರ ಮಾತುಗಳನ್ನಷ್ಟೇ ಸಿಎಂ ಹೆಚ್ಚು ಕೇಳುತ್ತಾರೆ. ಕಾಂಗ್ರೆಸ್- ಜೆಡಿಎಸ್ ನಾಯಕರ ಜೊತೆ ಸಿಎಂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ಬರಬೇಕು ಅಂದರೆ ನಾಯಕತ್ವ ಬದಲಿಸಬೇಕು ಎನ್ನುವ ಬೇಡಿಕೆಯನ್ನು ವಿರೋಧಿ ಬಣ ಅರುಣ್ ಸಿಂಗ್ ಮುಂದಿಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿಎಂ ಬಣದಿಂದಲೂ ಯಡಿಯೂರಪ್ಪ ಪರ ವಕಾಲತ್ತು ವಹಿಸಲು ಸಿದ್ಧತೆ ನಡೆದಿದೆ. ವಯಸ್ಸನ್ನು ಮೀರಿದ ಕೆಲಸವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ. ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಪಕ್ಷಕ್ಕೆ ಹೆಚ್ಚು ನಷ್ಟವಾಗಲಿದೆ. ಯಡಿಯೂರಪ್ಪ ಹಿಂದೆ ದೊಡ್ಡ ಸಮುದಾಯ ಇದೆ. ಹಾಗಾಗಿ ನಾಯಕತ್ವ ಬದಲಾವಣೆ ಅನ್ನುವುದಕ್ಕೆ ಬ್ರೇಕ್ ಹಾಕಬೇಕು. ಪಕ್ಷ ವಿರೋಧಿಗಳ ಬಾಯಿಗೆ ಲಗಾಮು ಹಾಕಬೇಕು. ಸಿಎಂ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ಮುಂದಿಡಲಿದ್ದಾರೆ ಎನ್ನಲಾಗ್ತಿದೆ.
ಪರ-ವಿರೋಧಿ ಬಣದ ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸಿದ ನಂತರ ಪಕ್ಷದ ಕೋರ್ ಕಮಿಟಿ ಸಭೆ ನಡೆಸಲಿರುವ ಅರುಣ್ ಸಿಂಗ್, ಆಂತರಿಕ ಗೊಂದಲದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದು ನಂತರ ಸಮಗ್ರ ವರದಿಯನ್ನು ಹೈಕಮಾಂಡ್ ಗೆ ಸಲ್ಲಿಕೆ ಮಾಡಲಾಗುತ್ತದೆ ಎನ್ನಲಾಗಿದೆ.