ತಿರುವನಂತಪುರಂ: ಪತ್ರಕರ್ತ ಸಿದ್ದೀಕ್ ಕಪ್ಪನ್ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಕಳುಹಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಕಪ್ಪನ್ ಬಂಧನದಲ್ಲಿದ್ದಾನೆ. ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಕೆ ಸುಧಾಕರನ್ ನೇತೃತ್ವದ 11 ಯುಡಿಎಫ್ ಸಂಸದರು ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಕೋರಿ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಜಂಟಿ ಪತ್ರ ಕಳುಹಿಸಿದ್ದರು.
ತನ್ನ ಗಂಡನ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಸಿದ್ದೀಕ್ ಕಪ್ಪನ್ ಅವರ ಪತ್ನಿ ಮುಖ್ಯಮಂತ್ರಿಗೆ ಒತ್ತಾಯಿಸಿದ್ದರು. ಕೊರೊನಾ ಸೋಂಕಿಗೆ ಒಳಗಾದ ನಂತರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಸಹ ಅವರನ್ನು ಹಾಸಿಗೆಗೆ ಚೈನ್ ಹಾಕಿ ಬಂಧನದಲ್ಲಿ ಇರಿಸಿದ್ದರು ಎಂದು ದೂರಿದ್ದರು.
ಇದರ ನಡುವೆಯೇ ಕೇರಳ ಪತ್ರಕರ್ತರ ಒಕ್ಕೂಟ ಮತ್ತು ಹಿರಿಯ ಪತ್ರಕರ್ತರ ಬೇಡಿಕೆ ಹಿನ್ನೆಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯುಪಿ ಮುಖ್ಯಮಂತ್ರಿಗೆ ಪತ್ರ ಕಳುಹಿಸಿದ್ದಾರೆ.