ವಿಶಾಕಪಟ್ಟಣಂ : ಮಹಾಮಾರಿ ಕೊರೊನಾ 35 ದಿನಗಳ ಮಗುವಿಗೂ ವಕ್ಕರಿತ್ತು. ಆದರೆ, ಇನ್ನೂ ಪ್ರಪಂಚವನ್ನೇ ಸರಿಯಾಗಿ ಕಣ್ತೆರೆದು ನೋಡದ ಮಗು ಮಹಾಮಾರಿಯನ್ನು ಒದ್ದೋಡಿಸಿದೆ.
ಗಜುವಾಕಾ ನಾಡುಪುರ ಪ್ರದೇಶದ ಅಕುಲ ಪ್ರಶಾಂತಿ (31) ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಏಪ್ರಿಲ್ 27 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ತಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು.
9ನೇ ದಿನ ತೀವ್ರ ಅಸ್ವಸ್ಥವಾಗಿತ್ತು. ಈ ಹಿನ್ನೆಲೆ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮಗುವಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಮಗುವನ್ನು ತಕ್ಷಣ ಎನ್‌ಐಸಿಯುನಲ್ಲಿ ಇರಿಸಲಾಗಿತ್ತು. ನಂತರ ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಹಾಗೆ ಐವಿ ರೆಮ್ಡಿಸಿವಿರ್ನ ಐದು ದಿನಗಳ ಕಾಲ ನೀಡಲಾಯಿತು.
ಇದಾದ ನಂತರ ಮಗುವಿನ ಶ್ವಾಸಕೋಶವು ಉಬ್ಬಿಕೊಳ್ಳುತ್ತಿದ್ದಂತೆ ಐವಿ ಸ್ಟೀರಾಯ್ಡ್‌ಗಳನ್ನು ಐದು ದಿನಗಳವರೆಗೆ ನೀಡಲಾಯಿತು. ನಂತರ ಮಗುವಿನ ಆರೋಗ್ಯ ಸುಧಾರಿಸಿದಂತೆ ಕಂಡು ಬಂತು. ಏಳು ದಿನಗಳ ನಂತರ ವೆಂಟಿಲೇಟರ್ ತೆಗೆದು ಹಾಕಲಾಯಿತು.
ಮಗುವಿಗೆ ಪ್ರಸ್ತುತ 35 ದಿನಗಳಾಗಿವೆ. ನಿನ್ನೆ ಮಗುವನ್ನು ಡಿಸ್ಚಾರ್ಜ್ ಮಾಡಿ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಡಾ.ಸೈಸುನಿಲ್ ಕಿಶೋರ್ ಮಾಹಿತಿ ನೀಡಿದ್ದಾರೆ.