ಮುಂಬೈ (ಮಹಾರಾಷ್ಟ್ರ): ವಿವಾದಿತ, ಹಿಂದಿ ರಿಯಾಲಿಟಿ ಶೋ 'ಬಿಗ್ಬಾಸ್ ಓಟಿಟಿ ಸೀಸನ್ 2' ಶುರುವಾಗಿದೆ. ಹಲವಾರು ಸ್ಪರ್ಧಿಗಳು 'ಗೃಹ ಪ್ರವೇಶ' ಮಾಡಿದ್ದಾರೆ. ಭಾರತ ತಂಡದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರು ನಟಿ ಸನ್ನಿ ಲಿಯೋನ್, 'ಬಿಗ್ ಬಾಸ್ 16' ವಿಜೇತ ಎಂ.ಸಿ. ಸ್ಟಾನ್ ಮತ್ತು ನಟ ಸಂದೀಪ್ ಸಿಕಂದ್ ಅವರೊಂದಿಗೆ ಪ್ಯಾನಲಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಸೀಸನ್ ವಿಶೇಷ ರೂಪದಲ್ಲಿ ಮೂಡಿಬರಲಿದ್ದು, ಸ್ಪರ್ಧಿಗಳೊಂದಿಗೆ ಪ್ಯಾನಲಿಸ್ಟ್ಗಳನ್ನೂ ಹೊಂದಿದೆ. ಮೂವರು ಪ್ಯಾನಲಿಸ್ಟ್ಗಳು ಇರಲಿದ್ದು ಕ್ರಿಕೆಟಿಗ ಅಜಯ್ ಜಡೇಜಾ ಕೂಡ ಒಬ್ಬರು. ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರ್ಯಕ್ರಮ ಮುನ್ನಡೆಸಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿರುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಅಜಯ್ ಜಡೇಜಾ, "ಭಾರತದ ಅತಿದೊಡ್ಡ ರಿಯಾಲಿಟಿ ಶೋನ ಭಾಗವಾಗಲು ಮತ್ತು ಹೊಸ ಪೀಳಿಗೆಯೊಂದಿಗೆ ಸಂವಹನ ನಡೆಸಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಕ್ರಿಕೆಟ್ ಮತ್ತು ಸಿನಿಮಾ ಮನರಂಜನೆ ಬೇರೆ ಬೇರೆ. ಕ್ರಿಕೆಟ್‌ಗಿಂತ ಭಿನ್ನವಾಗಿ ಇದು ನನಗೆ ಹೊಸ ಅನುಭವ" ಎಂದರು.
"ಬಿಗ್ ಬಾಸ್ ಓಟಿಟಿಯಲ್ಲಿ ಇಡೀ ರಾಷ್ಟ್ರವು ನೈಜತೆಯನ್ನು ತಿಳಿದುಕೊಳ್ಳಲಿದೆ. ಇಲ್ಲಿ ಪ್ರತಿಯೊಂದು ಆಲೋಚನೆಯೂ ಪ್ರಶ್ನೆಗೆ ಒಳಗಾಗುತ್ತದೆ. ಪ್ರತಿ ಮಾತೂ ಎಚ್ಚರಿಕೆಯಿಂದ ಕೂಡಿರುತ್ತದೆ. ಅದಕ್ಕಾಗಿ ನಾನು ಈ ಶೋನಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.
ಸನ್ನಿ ಲಿಯೋನ್ ಪ್ಯಾನಲಿಸ್ಟ್: ಬಾಲಿವುಡ್ ಮಾದಕ ಬೆಡಗಿ ನಟಿ ಸನ್ನಿ ಲಿಯೋನ್ ಅವರು ಪ್ಯಾನಲಿಸ್ಟ್ ಆಗಿರುತ್ತಾರೆ ಎಂದು ಶೋ ಆರಂಭಕ್ಕೂ ಮೊದಲು ತಂಡ ಘೋಷಣೆ ಮಾಡಲಾಗಿತ್ತು. ನಿರೂಪಕ ಸಲ್ಮಾನ್ ಖಾನ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲಿರುವ ಬಗ್ಗೆ ಸನ್ನಿ ಸಂತಸ ವ್ಯಕ್ತಪಡಿಸಿ, "ಬಿಗ್ ಬಾಸ್ ಒಟಿಟಿಯಲ್ಲಿ ಭಾಗಿಯಾಗುತ್ತಿರುವುದು ನನಗೆ ಮರು ಪ್ರವೇಶ ಎಂಬಂತಿದೆ. ಇದು ನನ್ನ ವೃತ್ತಿಜೀವನದ ಮಹತ್ವದ ತಿರುವುಗಳಲ್ಲಿ ಒಂದು. ಹಲವು ನೆನಪುಗಳು ಮರುಕಳಿಸುತ್ತಿವೆ. ನಾನು ಕಾರ್ಯಕ್ರಮವನ್ನು ತುಂಬಾ ಹತ್ತಿರದಿಂದ ನೋಡುತ್ತೇನೆ. ಅದನ್ನೀಗ ಮುಂದಿನ ಹಂತಕ್ಕೆ ಕೊಂಡೊಯ್ಯುವ ಅವಕಾಶ ಬಂದಿದೆ. ಆದ್ದರಿಂದ, ಹೊಸ ಸೀಸನ್ ನಿರೀಕ್ಷಿಸಿ ಮತ್ತು ವೀಕ್ಷಿಸಿ" ಎಂದು ಕೋರಿದ್ದರು.
ಪ್ಯಾನಲಿಸ್ಟ್‌ಗಳ ಪಾತ್ರವೇನು?: ಮೊದಲ ಸೀಸನ್ನ ಬಿಗ್ಬಾಸ್ ಓಟಿಟಿಯು ತನ್ನ ಹೆಚ್ಚಿನ ಅಶಿಸ್ತಿನಿಂದಾಗಿ ವಿವಾದಕ್ಕೀಡಾಗಿತ್ತು. ಸ್ಪರ್ಧಿಗಳ ಮಾತು, ನಡತೆ ಸಭ್ಯತೆ ಮಿತಿ ಮೀರಿತ್ತು. ಹೀಗಾಗಿ ಓಟಿಟಿ ಬಿಗ್ಬಾಸ್ ಟೀಕೆಗೆ ಗುರಿಯಾಗಿತ್ತು. ಅದನ್ನೆಲ್ಲ ಮೀರಿ ಈ ಬಾರಿ ಮತ್ತೊಂದು ಸೀಸನ್ ಆರಂಭಿಸಲಾಗುತ್ತಿದೆ. ಹೆಚ್ಚು ಅಭಿಮಾನಿ ಬಳಗ ರಿಯಾಲಿಟಿ ಶೋಗಿದೆ.
ಸ್ಪರ್ಧಿಗಳು, ಕಾರ್ಯಕ್ರಮದ ನಿರೂಪಕನೊಂದಿಗೆ ಮೂವರು ಪ್ಯಾನಲಿಸ್ಟ್ಗಳನ್ನು ಇದು ಹೊಂದಿದೆ. ಅಂದರೆ, ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ನಡೆದುಕೊಳ್ಳುವುದರ ಮೇಲೆ ಇವರು ಯಾವುದೇ ರೀತಿಯ ಪ್ರಶ್ನೆ ಕೇಳಬಹುದು. ಅದನ್ನು ಈ ಹಿಂದೆ ನಿರೂಪಕರೇ ಮಾಡುತ್ತಿದ್ದರು. ಈ ಬಾರಿ ಪ್ರತ್ಯೇಕ ಪ್ಯಾನಲ್ ರಚನೆ ಮಾಡಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಹಿಂದಿ ಓಟಿಟಿಗೆ ಸನ್ನಿ ಲಿಯೋನ್: ರಿಯಾಲಿಟಿ ಶೋನಲ್ಲಿ ಮಸ್ತ್ ಮಜಾ