ಡಾಲಿ ಪಿಕ್ಚರ್ಸ್ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ. ಉಮೇಶ್ ಕೆ.ಕೃಪ ನಿರ್ದೇಶನದ 'ಟಗರು ಪಲ್ಯ' ಸಿನಿಮಾ ಮೂಲಕ ನಾಯಕ ನಟಿಯಾಗಿ ಅಮೃತಾ ಪ್ರೇಮ್ ಸಿನಿಮಾಪ್ರೇಮಿಗಳಿಗೆ ಹತ್ತಿರವಾಗುತ್ತಿದ್ದಾರೆ. ಈಗಾಗಲೇ 'ಟಗರು ಪಲ್ಯ' ಲುಕ್ನಲ್ಲಿ ಪ್ರೇಕ್ಷಕರಿಂದ ಅಪಾರ ಪ್ರೀತಿ ಪಡೆದುಕೊಂಡಿರುವ ಅಮೃತಾ ಇಂದು ಹುಟ್ಟುಹಬ್ಬದ ಜೋಶ್‌ನಲ್ಲಿದ್ದಾರೆ. ಇವರು ಕಲಾವಿದೆಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಈ ಬಾರಿಯ ವಿಶೇಷತೆ. ಚಿತ್ರತಂಡವೂ ಕೂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಟಗರು ಪುಟ್ಟಿಗೆ ಶುಭ ಕೋರಿದೆ.
ಇದನ್ನೂ ಓದಿ: ಸಿನಿಮಾ ಕ್ಷೇತ್ರ ಪ್ರವೇಶಿಸಿದ ನೆನಪಿರಲಿ ಪ್ರೇಮ್ ಮಗಳು; 'ಟಗರು ಪಲ್ಯ'ದಿಂದ ಅದೃಷ್ಟ ಪರೀಕ್ಷೆ!
ಏನಿದು ಟಗರು ಪಲ್ಯ?: ಟಗರು ಪಲ್ಯದಲ್ಲಿ ಅಮೃತಾ ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ವರ್ಕ್‌ಶಾಪ್ ಮೂಲಕ ಸಾಕಷ್ಟು ತಯಾರಿ ನಡೆಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಭಿನಯಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಉಮೇಶ್ ಕೆ.ಕೃಪ, "ಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು ಆ ನಯ ನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತ ನಟಿಸಿದ್ದಾರೆ. ಭಾಷೆ ಮೇಲೆ ಅವರಿಗೆ ಹಿಡಿತವಿದೆ. ಮಂಡ್ಯ ಸ್ಲ್ಯಾಂಗ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಕಂಪ್ಲೀಟ್ ಆಗಿದ್ದು ಬಹಳ ಬೇಗ ಎಲ್ಲವನ್ನು ಕಲಿತುಕೊಂಡು ಅಭಿನಯ ಮಾಡಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಕ್ಕಟ್ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರವನ್ನು ಉಮೇಶ್.ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.
ಟಗರು ಪಲ್ಯ ಕಟೆಂಟ್ ಆಧಾರಿತ ಸಿನಿಮಾ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್.ಕೆ.ರಾವ್ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್‌ನಡಿ ನಿರ್ಮಾಣವಾಗುತ್ತಿರುವ 3ನೇ ಸಿನಿಮಾವಿದು. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ.
ಇದನ್ನೂ ಓದಿ: ಡಾಲಿ ಧನಂಜಯ್ ಬ್ಯಾನರ್ ಸಿನಿಮಾಗೆ ನೆನಪಿರಲಿ ಪ್ರೇಮ್ ಮಗಳು ನಟಿ: ಹಳ್ಳಿ ಹುಡುಗಿ ಪಾತ್ರದಲ್ಲಿ ಅಮೃತಾ ಮಿಂಚಿಂಗ್
ಸಂತಸ ವ್ಯಕ್ತಪಡಿಸಿದ್ದ ಪ್ರೇಮ್: ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ನೆನಪಿರಲಿ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದರು. "ನಾನು ಒಬ್ಬ ನಟನಾಗಿ ಮಗಳು ಚಿತ್ರರಂಗಕ್ಕೆ ಬರುತ್ತಿರೋದಕ್ಕೆ ಖುಷಿ ಇದೆ. ಆಕೆ ಓದುವುದರಲ್ಲೂ ಡಿಸ್ಟಿಂಕ್ಷನ್. ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದಾಳೆ ನಿರ್ದೇಶಕ ಉಮೇಶ್.ಕೆ.ಕೃಪ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಕೇಳಿದ ಮೇಲೆ ಬೇಡ ಎನ್ನಲಾಗಲಿಲ್ಲ. ಕನ್ನಡ ಜನತೆ ಆಕೆಗೆ ಪ್ರೀತಿ ಪ್ರೋತ್ಸಾಹ ನೀಡಿ ಬೆಳೆಸಬೇಕು' ಎಂದು ಮನವಿ ಮಾಡಿದ್ದರು.
"ಇದು ನನಗೆ ದೊಡ್ಡ ಜವಾಬ್ದಾರಿ ಖಂಡಿತಾ ನಾನು ಪ್ರೂವ್ ಮಾಡ್ತೇನೆ. ಕಥೆ ಹಾಗೂ ಇದ್ರಲ್ಲಿರೋ ಮೆಸೇಜ್ ತುಂಬಾ ಇಷ್ಟ ಆಯ್ತು, ಹಾಗಾಗಿ ಒಪ್ಪಿಕೊಂಡೆ. ಅವಕಾಶ ಕೊಟ್ಟಿದ್ದಕ್ಕೆ ಧನಂಜಯ್ ಸರ್ಗೆ ಧನ್ಯವಾದಗಳು. ಆ್ಯಕ್ಟಿಂಗ್ ಫೀಲ್ಡ್ಗೆ ಬರ್ತೀನಿ ಅಂತ ಯೋಚನೆ ಮಾಡಿರಲಿಲ್ಲ. ಈ ಸಿನಿಮಾ ಕಥೆ ಬಂದಾಗ ಅಪ್ಪ ನನಗೆ ಒಂದೇ ಮಾತು ಹೇಳಿದ್ದು ಕಲಿಬೇಕು ಅಂತ ಇಂಟ್ರಸ್ಟ್ ಇದ್ದರೆ ಯಾವುದು ಬೇಕಾದ್ರು ಸಾಧ್ಯ ಎಂದು ಆದ್ರಿಂದ ಒಪ್ಪಿಕೊಂಡೆ. ಖಂಡಿತಾ ನನ್ನ ಬೆಸ್ಟ್ ಈ ಸಿನಿಮಾಗೆ ನೀಡುತ್ತೇನೆ" ಎಂದು ಅಮೃತಾ ಪ್ರೇಮ್ ಮೊದಲ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ: ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ