ಬೆಂಗಳೂರು: 70ರ ದಶಕದಲ್ಲಿ ಕನ್ನಡದ ಬೆಳ್ಳಿ ತೆರೆ ಮೇಲೆ ರಾರಾಜಿಸಿದ ನಟಿ ಲೀಲಾವತಿ. ಇವರು ಡಾ.ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್, ಸಿ.ಅಶ್ವಥ್, ರವಿಚಂದ್ರನ್ ಹೀಗೆ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.
ಲೀಲಾವತಿ, ಸದ್ಯ ಬೆಂಗಳೂರಿನ ಹೊರ ಹೊಲಯದಲ್ಲಿರುವ ಸೋಲದೇವನಹಳ್ಳಿ ಬಳಿಯ ತೋಟದಲ್ಲಿ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ. ಚಿತ್ರರಂಗದ ಯಾವುದೇ ಹೋರಾಟ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಇವರು, ನಟನೆಯಿಂದ ಮಾತ್ರ ದೂರ ಉಳಿದಿದ್ದಾರೆ. ಹಾಗಾಗಿಯೇ, ಲೀಲಾವತಿಯವರ ಮನೆಗೆ ನಟಿಯರು ಆಗಾಗ ಭೇಟಿ ಕೊಡುತ್ತಲೇ ಇರುತ್ತಾರೆ. ಲೀಲಾವತಿ ಅವರ ಯೋಗ - ಕ್ಷೇಮ ವಿಚಾರಿಸುತ್ತ, ಊಟೋಪಚಾರ ಮಾಡುತ್ತಾ ಅವರೊಟ್ಟಿಗೆ ಕೆಲ ಕಾಲ ಕಳೆಯುತ್ತಾರೆ.
ಇತ್ತೀಚಿಗಷ್ಟೇ ಲೀಲಾವತಿ ಅವರ ತೋಟಕ್ಕೆ ನಟಿಯರಾದ ಶ್ರುತಿ, ಸುಧಾರಾಣಿ, ಮಾಳ್ವಿಕ ಅವಿನಾಶ್ ಭೇಟಿ ನೀಡಿದ್ದರು. ಅವರೊಂದಿಗೆ ಊಟ ಮಾಡಿ ಹಲವು ಗಂಟೆಗಳ ಕಾಲ ಕಳೆದಿದ್ದರು. ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಹೇಮಾಚೌಧರಿ ಹಾಗೂ ಶೃತಿ ಅವರ ತೋಟಕ್ಕೆ ಭೇಟಿ ನೀಡಿ, ಶಾಲು ಹೊದಿಸಿ ಗೌರವಿಸಿದ್ದಾರೆ.
ಇದನ್ನೂ ಓದಿ: ಶಾನೆ ಟಾಪಾಗವಳೆ.. ಬೆಣ್ಣೆ ನಗರಿಯ ಬೆಡಗಿ ಅದಿತಿ ಪ್ರಭುದೇವ ರೂಮ್ ಹೇಗಿದೆ ಗೊತ್ತಾ?
ಒಟ್ಟಿಗೆ ಕುಳಿತು ಊಟ ಮಾಡುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವಿಡಿಯೋವನ್ನು ನಟಿ ಶ್ರುತಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.