ಸಾಜಿದ್ ಖಾನ್ ಮೀಟೂ ಅಭಿಯಾನದಲ್ಲಿ ಕೇಳಿಬಂದಿದ್ದ ಹೆಸರು. ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸಾಜಿದ್ ಖಾನ್ ಈಗ ಹಿಂದಿ ಬಿಗ್ ಬಾಸ್ 16ರ ಸ್ಪರ್ಧಿ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋನಲ್ಲಿ ಸಾಜಿದ್ ಖಾನ್ ಎಂಟ್ರಿ ಆದಾಗಿನಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಮೀಟೂ ಆರೋಪಿಯನ್ನೇಕೆ ಈ ಮನೆಯಲ್ಲಿರಿಸಿದ್ದೀರಾ ಎಂಬ ಪ್ರಶ್ನೆಗಳು ಬಿಗ್ಬಾಸ್ಗೆ ತಲುಪುತ್ತಿದೆ.
ಸಾಜಿದ್ ಖಾನ್ ಅವರನ್ನು ಮನೆಯಿಂದ ಹೊರ ಹಾಕುವಂತೆ ಒತ್ತಾಯ ಹೇರಲಾಗುತ್ತಿದ್ದು, ಏನಾಗುತ್ತದೆ ಎಂಬ ಚರ್ಚೆ ಶುರುವಾಗಿದೆ. ಸಾಜಿದ್ ಖಾನ್ರನ್ನು ದೊಡ್ಮನೆಯಿಂದ ಹೊರಹಾಕಲಾಗುತ್ತದೆ ಎಂದು ಕೆಲ ವರದಿಗಳು ತಿಳಿಸಿದ್ದರೆ, ಅವರು ಬಿಗ್ಬಾಸ್ ಮನೆಯಲ್ಲೇ ಉಳಿದುಕೊಳ್ಳುತ್ತಾರೆಂದು ಕೆಲ ವರದಿ ತಿಳಿಸಿವೆ.
ಮಂದನಾ ಕರಿಮಿ, ಆಹಾನಾ ಕುಮ್ರಾ, ಕನಿಷ್ಕಾ ಸೋನಿ ಮತ್ತು ಶೆರ್ಲಿನ್ ಚೋಪ್ರಾ ಸೇರಿದಂತೆ ಹಲವರು ಸಾಜಿದ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪಾರ್ಟಿಗಳಲ್ಲಿ ತನ್ನ ಖಾಸಗಿ ಅಂಗಗಳನ್ನು ತೋರಿಸಿದ್ದಾರೆ, ಕಾಸ್ಟಿಂಗ್ ಪ್ರಕ್ರಿಯೆಯ ಭಾಗವಾಗಿ ತಮ್ಮ ನಗ್ನ ಚಿತ್ರಗಳನ್ನು ಕಳುಹಿಸಲು ಕೇಳಿರುವುದು ಸೇರಿದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪಗಳನ್ನು ಅವರು ಹೊತ್ತಿದ್ದಾರೆ.
ಸಾಜಿದ್ ಅವರನ್ನು ಹೊರಹಾಕಲು ಕಲರ್ಸ್ ನಿರ್ಧರಿಸಿದೆ ಎಂದು ಹಿಂದಿನ ವರದಿಗಳು ತಿಳಿಸಿವೆ. ಒಂದು ವಾರದೊಳಗೆ ಸಾಜಿದ್ ರಿಯಾಲಿಟಿ ಶೋನಿಂದ ನಿರ್ಗಮಿಸಬೇಕಾಗುತ್ತದೆ ಎಂದು ವರದಿಗಳು ಹೇಳಿವೆ. ಆದಾಗ್ಯೂ, ಅವರು ಈ ಕಾರ್ಯಕ್ರಮದಲ್ಲಿ ಮುಂದುವರೆಯಲಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.
"ಇವೆಲ್ಲವೂ ಕೇವಲ ವದಂತಿಗಳು ಮತ್ತು ಅದರಲ್ಲಿ ಯಾವುದೇ ಸತ್ಯವಿಲ್ಲ. ಸಾಜಿದ್ ಖಾನ್ ಬಿಗ್ ಬಾಸ್ 1 ರ ಮನೆಯಿಂದ ಹೊರಹಾಕಲ್ಪಡುವುದರಲ್ಲಿ ಯಾವುದೇ ಸತ್ಯವಿಲ್ಲ. ಅವರು ಕಾರ್ಯಕ್ರಮದಲ್ಲಿದ್ದಾರೆ. ಎಲಿಮಿನೇಶನ್ ಆದರೆ ಮಾತ್ರ ನಿಯಮಗಳ ಪ್ರಕಾರ ಹೊರಬರುತ್ತಾರೆ. ಈ ಎಲ್ಲ ವದಂತಿಗಳನ್ನು ಅವರ ವಿರುದ್ಧ ವೈಯಕ್ತಿಕ ಸೇಡಿನಿಂದ ಹರಡಲಾಗಿದೆ" ಎಂದು ಮೂಲವೊಂದು ತಿಳಿಸಿದೆ.
ಇದನ್ನೂ ಓದಿ: ಸಲ್ಮಾನ್ ನನ್ನ ಭಾಯಿಜಾನ್ ಆಗಿ; ಸಾಜಿದ್ ಖಾನ್ರನ್ನು ಮನೆಯಿಂದ ಹೊರಹಾಕಿ: ಶೆರ್ಲಿನ್ ಚೋಪ್ರಾ
ಈ ಹಿಂದೆ, ಸಾಜಿದ್ ವಿರುದ್ಧ ಆರೋಪ ಮಾಡಿದ್ದ ಮಂದನಾ ಕರಿಮಿ ಸಂದರ್ಶನವೊಂದರಲ್ಲಿ ಸಾಜಿದ್ ಅವರಿಗೆ ಶೋನಲ್ಲಿ ಸ್ಥಾನ ನೀಡಿದ್ದರಿಂದ ಇನ್ನು ಮುಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ ಎಂದು ಹೇಳಿದ್ದರು. ಅವರಲ್ಲದೇ, ಗಾಯಕಿ ಸೋನಾ ಮೊಹಾಪಾತ್ರ ಅವರು ಸಾಜಿದ್ ಪ್ರವೇಶದ ಬಗ್ಗೆ ಕಾರ್ಯಕ್ರಮದ ತಯಾರಕರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಶೆರ್ಲಿನ್ ಚೋಪ್ರಾ, ಉರ್ಫಿ ಜಾವೇದ್, ಶೆಹನಾಜ್ ಗಿಲ್ ಮತ್ತು ಕಾಶ್ಮೇರಾ ಶಾ ಕೂಡ ಟೀಕಿಸಿದ್ದಾರೆ.
ನೀವು ಭಾಯಿಜಾನ್ ಅಲ್ವಾ, ಎಲ್ಲರೂ ನಿಮ್ಮನ್ನು ಭಾಯಿಜಾನ್ ಎನ್ನತ್ತಾರಲ್ವಾ?, ನನ್ನ ಭಾಯಿ ಆಗಿ, ಸಾಜಿದ್ ಖಾನ್ರನ್ನು ಮನೆಯಿಂದ ಹೊರಹಾಕಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಏನಿದು ನಾಟಕ, ಆ ವ್ಯಕ್ತಿಯಿಂದ ಆಟ ಆಡಿಸುತ್ತಿದ್ದೀರಾ? ನಮ್ಮನ್ನೂ ಕರೆಯಿರಿ ಹಾಗಾದ್ರೆ, ನಮಗೂ ಅವಕಾಶ ಕೊಡಿ ಎಂದಿದ್ದಾರೆ.
ಅವರ ತಪ್ಪುಗಳಿಗೆ ಪರದೆ ಹಾಕುವ ಕೆಲಸ ಆಗುತ್ತಿದೆ. ನಿಮ್ಮ ತಂಗಿಯನ್ನು (ಶೆರ್ಲಿನ್ ಚೋಪ್ರಾ) ಕರೆಸಿಕೊಂಡು ಸಮಸ್ಯೆ ಆಲಿಸಿ, ಆತನನ್ನು ಹೊರಹಾಕಿ, ಇದು ನಿಮ್ಮ ತಂಗಿಯ ಮನವಿ ಎಂದು ನಟಿ ಶೆರ್ಲಿನ್ ಚೋಪ್ರಾ ಅವರು ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ಗೆ ತಿಳಿಸಿದ್ದಾರೆ.