ಹೈದರಾಬಾದ್: ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಬಳ್ಳಿಯಂತೆ ಬಳಕುವ ಜೊತೆಗೆ ಫಿಟ್ ಆಗಿರುವ ಆಸೆ. ಇದೆ ಕಾರಣಕ್ಕೆ ತಮ್ಮ ತೂಕ ಹೆಚ್ಚಳದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾ ಅದನ್ನು ಇಳಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಈ ತೂಕದ ಚಿಂತೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ, ಸಾಮಾನ್ಯ ಜನರನ್ನು ಕಾಡುತ್ತದೆ. ಇದೇ ಕಾರಣಕ್ಕೆ ಡಯಟ್ ಮೊರೆ ಹೋಗುತ್ತಾರೆ. ಆದರೆ, ಈ ಡಯಟ್ಗಳು ನಿಮ್ಮ ಆರೋಗ್ಯಕ್ಕೆ ಅನುಕೂಲಕರವಾಗಿರಬೇಕು ಹೊರತು ಮಾರಾಣಾಂತಿಕವಾಗಿರಬಾರದು. ಬೇಗ ತೂಕ ಕಳೆದುಕೊಳ್ಳುವ ಅನೇಕ ಡಯಟ್ಗಳು ನಿಮ್ಮ ಜೀವಕ್ಕೆ ಕುತ್ತು ತರುವುದು ಸುಳ್ಳಲ್ಲ.
ಅಂತಹ ಡಯಟ್ನಲ್ಲಿ ಒಂದು ಕ್ರಶ್ ಡಯಟ್. ತಜ್ಞರ ಹೇಳುವಂತೆ, ಈ ಕ್ರಶ್ ಡಯಟ್ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಗಮನಾರ್ಹವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ಈ ಡಯಟ್ ಅನುಸರಿಸುವುದರಿಂದ ವಾರದಲ್ಲಿ ತೂಕವನ್ನು ಕಳೆದುಕೊಳ್ಳುವುದು ಗ್ಯಾರಂಟಿ ಎನ್ನುತ್ತಾರೆ. ಈ ಡಯಟ್ ಅನುಕರಿಸುವ ಮಂದಿ ದಿನಕ್ಕೆ ಕೇವಲ 700 ಕ್ಯಾಲೋರಿ ಆಹಾರವನ್ನು ಮಾತ್ರ ಸೇವಿಸಬೇಕು. ಬ್ರೇಡ್ ಮತ್ತು ರೈಸ್ ಪ್ರಮಾಣ ಕಡಿಮೆ ಮಾಡುವ ಮೂಲಕ ಹಣ್ಣು ಮತ್ತು ತರಕಾರಿ ಪ್ರಮಾಣ ಹೆಚ್ಚಿಸಬೇಕು.
ಅನೇಕ ಸಮಸ್ಯೆಗಳಿಗೆ ಮೂಲ: ಕ್ರಶ್ ಡಯಟ್ ಸೇವಿಸುವ ಮಂದಿ ಬಲು ಬೇಗ ತೂಕ ಕಳೆದುಕೊಳ್ಳುತ್ತಾರೆ. ಈ ಡಯಟ್ ಅನುಸರಿಸುವ ಶೇ 25ರಷ್ಟು ಮಂದಿಯಲ್ಲಿ ಗ್ಯಾಲ್ಸ್ಟೋನ್ (ಪಿತ್ತಗಲ್ಲು) ಅಭಿವೃದ್ಧಿಯಾಗಿ ಅದು ಮಾರಣಾಂತಿಕವಾಗುತ್ತದೆ. ಕ್ರಶ್ ಡಯಟ್ ವೇಳೆ ವ್ಯಕ್ತಿ ಸೇವಿಸುವ ಎಲೆಕ್ಟ್ರೋಲೈಟ್ಸ್ ಅಸಮಾತೋಲನವಾಗುತ್ತದೆ. ಇದರಿಂದ ಮೂತ್ರಪಿಂಡ ಸಮಸ್ಯೆ ಕೂಡ ಉದ್ಬವಿಸಬಹುದು. ಈ ಡಯಟ್ನಿಂದ ಹೃದಯ ಬಡಿತ ಕೂಡ ಏರುಪೇರಾಗುತ್ತದೆ. ಇದರಿಂದ ಹೃದಯಾಘಾತ ಕೂಡ ಸಂಭವಿಸಬಹುದು. ಈ ಡಯಟ್ ಅನುಸರಿಸುವವರಲ್ಲಿ ಕಾಡುವ ಪ್ರಮುಖ ತೊಂದರೆ ಶಾಶ್ವತವಾಗಿ ಕೂದಲು ಕಳೆದುಕೊಳ್ಳುವಿಕೆಯಾಗಿದೆ.
ಬಾಲಿವುಡ್ನ ಖ್ಯಾತ ನಟಿ ಶ್ರೀದೇವಿ ಕೂಡ ಈ ಕ್ರಶ್ ಡಯಟ್ ಅನ್ನು ಅನುಸರಿಸುತ್ತಿದ್ದರು. ಇದು ಅವರ ಸಾವಿಗೆ ಪ್ರಮುಖ ಕಾರಣವಾಗಿದೆ ಎಂಬುದನ್ನು ಆಕೆಯ ಗಂಡ ಖ್ಯಾತ ನಿರ್ಮಾಪಕರಾಗಿರುವ ಬೋನಿ ಕಪೂರ್ ಮಾಧ್ಯಮಗಳ ಮುಂದೆಯೇ ಹಂಚಿಕೊಂಡಿದ್ದರು. ಇದಾದ ಬಳಿಕ ಅನೇಕ ಮಂದಿಯಲ್ಲಿ ಈ ಕ್ರಶ್ ಡಯಟ್ ಎಂದರೇನು, ಇದರಿಂದ ನಟಿ ಹೇಗೆ ಸತ್ತರು ಎಂಬ ಪ್ರಶ್ನೆಗಳು ಕಾಡುತ್ತಿದೆ.
ತೆಳ್ಳಗೆ , ಫಿಟ್ ಆಗಿ ದೇಹ ಕಾಣಬೇಕು ಎಂಬ ಹುಚ್ಚಿನಲ್ಲಿ ಜೀವಕ್ಕೆ ಕುತ್ತು ತರುವ ಡಯಟ್ಗಳ ಅನುಸರಣೆ ಎಂದಿಗೂ ಒಳ್ಳೆಯದಲ್ಲ. ಒಂದು ವೇಳೆ ನೀವು ಈ ಕ್ರಶ್ ಡಯಟ್ ಅನ್ನು ಪಾಲಿಸುತ್ತಿದ್ದರೆ, ಎಚ್ಚರದಿಂದ ಇರುವುದು ಅತ್ಯವಶ್ಯಕ.
ಇದನ್ನೂ ಓದಿ: ನಟಿ ಶ್ರೀದೇವಿ ಸಾವು ಸಹಜವಲ್ಲ, ಆಕಸ್ಮಿಕ : ಬೋನಿ ಕಪೂರ್