ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಬಾಲಿವುಡ್ ಜನಪ್ರಿಯ ಕಲಾವಿದರನ್ನು ಪ್ರಶಂಸಿಸುವುದು ತೀರಾ ಅಪರೂಪ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ, ಬಾಲಿವುಡ್ ಬಹುಬೇಡಿಕೆ ನಟಿ ಆಲಿಯಾ ಭಟ್ ಅವರ ಬಗ್ಗೆ ಗುಣಗಾನ ಮಾಡಿದ್ದಾರೆ. ಗಂಗೂಭಾಯ್ ಕಥಿಯಾವಾಡಿ ನಟಿಯ ಪ್ರತಿಭೆಯನ್ನು ಪ್ರಶಂಸಿಸಿದ ನಿರ್ಮಾಪಕರು, ನಟಿ ಪ್ರಬುದ್ಧತೆಯಿಂದ ತಮ್ಮನ್ನು ನಿಭಾಯಿಸಿಕೊಳ್ಳುವ ರೀತಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಾನು ಆಲಿಯಾ ಭಟ್ ಅವರ ಅಭಿಮಾನಿ ಎಂಬುದನ್ನು ಹಿಂದಿ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ನಾಯಕ ನಟಿ ಆಲಿಯಾ ಅವರ ಕೆಲಸವನ್ನು ಮೆಚ್ಚಿರುವುದಾಗಿ ತಿಳಿಸಿದರು. ಅಲ್ಲದೇ ಅವರನ್ನು ತಮ್ಮ ಕುಟುಂಬದ ಭಾಗ ಎಂದು ಪರಿಗಣಿಸುವುದಾಗಿಯೂ ಹೇಳಿದರು. ಕಳೆದ ಕೆಲ ವರ್ಷಗಳಲ್ಲಿ ಆಲಿಯಾ ಭಟ್ ಓರ್ವ ನಟಿಯಾಗಿ ಕೆಲ ಬದಲಾವಣೆ ಅಥವಾ ವಿಕಸನಗೊಂಡಿರುವ ರೀತಿ ನನಗೆ ಇಷ್ಟವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಸಂದರ್ಶನದಲ್ಲಿ ನಿರ್ದೇಶಕರು ನಟಿಯನ್ನು ಹೊಗಳುವುದನ್ನು ಮುಂದುವರಿಸಿದರು. ಅದ್ಭುತ ಪ್ರತಿಭೆ ಹೊಂದಿದ್ದಾರೆ. ಹಾಗಾಗಿಯೇ ಅವರ ಬೆಳವಣಿಗೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅವರ ನಡವಳಿಕೆ ನನಗೆ ಹಿಡಿಸಿದೆ. ನಟಿಯ ಬಗ್ಗೆ ಚರ್ಚೆ ಬಂದಾಗಲೆಲ್ಲ ನಾನು ಅವರ ಬಗೆಗಿಗಿನ ನೆಗೆಟಿವ್ ಕಾಮೆಂಟ್ಸ್ ಸ್ವೀಕರಿಸುವುದಿಲ್ಲ. ಓರ್ವ ನಟಿ ಹೇಗೆ ಪ್ರಬುದ್ಧರಾಗಿರಬೇಕೆಂಬುದಕ್ಕೆ ಆಲಿಯಾ ಭಟ್ ಅವರೇ ಶ್ರೇಷ್ಠ ಉದಾಹರಣೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಕಾಶ್ಮೀರ ಫೈಲ್ಸ್ ಸಿನಿಮಾ ನಿರ್ದೇಶಕರು, ದಕ್ಷಿಣ ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಹಾಗೂ ಬಾಲಿವುಡ್ ನಟಿ ಕೃತಿ ಸನೋನ್ ಅವರನ್ನೂ ಹೊಗಳಿದ್ದಾರೆ. ಪಲ್ಲವಿ ಜೋಶಿ (ಪತ್ನಿ) ಹಾಗೂ ನಾನು ಕೃತಿ ಅವರ ಮಿಮಿ ಚಿತ್ರವನ್ನು ವೀಕ್ಷಿಸಿದೆ. ಸನೋನ್, ಚಿತ್ರದಲ್ಲಿ ಅತ್ಯಂತ ಪ್ರಬುದ್ಧ, ಸ್ಪರ್ಧಾತ್ಮಕ ಅಭಿನಯ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂತಾರಕ್ಕೆ ವರ್ಷದ ಸಂಭ್ರಮ: ಕಾಂತಾರ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ ಪ್ರೀಕ್ವೆಲ್ ಅಪ್ಡೇಟ್ಸ್ ಇಲ್ಲಿದೆ
ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಸನೋನ್ ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (ಅತ್ಯುತ್ತಮ ನಟ ನಟಿ) ಪಡೆಯಲಿದ್ದಾರೆ. ಪುಷ್ಪ, ಗಂಗೂಬಾಯಿ ಕಥಿಯಾವಾಡಿ, ಮಿಮಿ ಚಿತ್ರದಲ್ಲಿನ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ.
ಇದನ್ನೂ ಓದಿ: ಆರಾಧ್ಯ ಜೊತೆ ಐಶ್ವರ್ಯಾ ರೈ: ಅಮ್ಮ ಮಗಳ ಮುದ್ದಾದ ವಿಡಿಯೋ ವೈರಲ್
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಗುರುವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಕೋವಿಡ್ ಸೋಂಕು ಪ್ರಪಂಚದಾದ್ಯಂತ ಆವರಿಸಿದ ಸಂದರ್ಭ, ದೇಶೀಯ ಲಸಿಕೆಯನ್ನು ಅಭಿವೃದ್ಧಿಪಡಿಸಲು ಹಗಲು ರಾತ್ರಿ ಶ್ರಮಿಸಿದ ಭಾರತೀಯ ತಜ್ಞರ ಮೇಲೆ ಕಥೆ ಹೆಣೆಯಲಾಗಿದೆ. ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಸಪ್ತಮಿ ಗೌಡ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಸಾಧಾರಣವಾಗಿದೆ.