ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳು ಹಾಗೂ ಹೊಸತನದ ಕಥೆಗಳ ಮೂಲಕ ಚಿತ್ರ ಪ್ರೇಮಿಗಳನ್ನು ರಂಜಿಸುತ್ತಾ ಬಂದಿರುವ ಮಾಸ್ ಹೀರೋ ವಿನೋದ್ ಪ್ರಭಾಕರ್. ಲಂಕಾಸುರ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇಂದು ಚಿತ್ರ ತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನಟ ವಿನೋದ್ ಪ್ರಭಾಕರ್.
ವಿನೋದ್ ಪ್ರಭಾಕರ್ ಅವರು ಟೈಗರ್ ಟಾಕೀಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ ಲಂಕಾಸುರ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿದ್ದಾರೆ.
ಇಂದು "ಇಂಡಸ್ಟ್ರಿಯ ಹುಲಿಯ ವಂಶ" ಎಂಬ ಹಾಡನ್ನು ಬಿಡುಗಡೆ ಮಾಡುವ ಮೂಲಕ "ಲಂಕಾಸುರ" ತಂಡ ವಿನೋದ್ ಪ್ರಭಾಕರ್ ಅವರಿಗೆ ವಿನೂತನವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಚೇತನ್ ಆಲೂರ್ ಬರೆದಿರುವ ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ಹಾಗೂ ಮದ್ವೇಶ್ ಈ ಹಾಡನ್ನು ಹಾಡಿದ್ದಾರೆ. ಇಂದು ವಿನೋದ್ ಪ್ರಭಾಕರ್ ಪತ್ನಿ ನಿಶಾ, ಲಂಕಾಸುರ ಚಿತ್ರತಂಡದೊಂದಿಗೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಬರ್ತ್ ಡೇಯನ್ನು ಸೆಲೆಬ್ರೆಟ್ ಮಾಡಿದ್ದಾರೆ ಮರಿ ಟೈಗರ್.
ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಜನರ ಮೆಚ್ಚುಗೆ ಗಳಿಸಿದೆ. ಪ್ರಮೋದ್ ಕುಮಾರ್ ನಿರ್ದೇಶನದ 'ಲಂಕಾಸುರ' ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನಿರ್ದೇಶನ, ಸುಜ್ಞಾನ್ ಛಾಯಾಗ್ರಹಣ, ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಇದೆ.
ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ನಟಿಸಿದ್ದಾರೆ. ಮೊದಲ ಬಾರಿಗೆ ಲೂಸ್ ಮಾದ ಯೋಗಿ, ವಿನೋದ್ ಪ್ರಭಾಕರ್ ಜೊತೆಯಾಗಿದ್ದಾರೆ. ಹಿರಿಯ ನಟರಾದ ದೇವರಾಜ್ ಹಾಗೂ ರವಿಶಂಕರ್ ಕೂಡಾ ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ: ಶಾರುಖ್ ಸಿನಿಮಾ ನಿರ್ಮಿಸಲಿದೆ ಹೊಂಬಾಳೆ ಫಿಲ್ಮ್ಸ್: ಕಿಂಗ್ ಖಾನ್ ಜೊತೆ ಸ್ಯಾಂಡಲ್ವುಡ್ ಶೆಟ್ರು