ತಮ್ಮ ಜೀವನದ ನಂತರ ಬೇರೆಯೊಬ್ಬರ ಭಾಗವಾಗಲು ಇಷ್ಟಪಡುತ್ತೇನೆ ಎಂದು ಅರ್ಜುನ್ ರೆಡ್ಡಿ ಖ್ಯಾತಿಯ ತೆಲುಗು ಸೂಪರ್ಸ್ಟಾರ್ ವಿಜಯ್ ದೇವರಕೊಂಡ ತಿಳಿಸಿದ್ದಾರೆ. ಇತ್ತೀಚೆಗೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಾವು ಅಂಗಾಂಗ ದಾನ ಮಾಡುವುದಾಗಿ ತಿಳಿಸಿದರು.
ದಕ್ಷಿಣ ಏಷ್ಯಾದ ದೇಶಗಳಲ್ಲಿ ಅಂಗಾಂಗ ದಾನಗಳು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಸೂಪರ್ಸ್ಟಾರ್ ತಮ್ಮ ಅಭಿಮಾನಿಗಳು ಸೇರಿ ಅನೇಕರಿಗೆ ಅಂಗಾಂಗ ದಾನ ಮಾಡುವಂತೆ ಸ್ಫೂರ್ತಿ ನೀಡಿದ್ದಕ್ಕಾಗಿ ಪ್ರಶಂಸಿಸಲಾಗುತ್ತಿದೆ.
ಮಕ್ಕಳ ದಿನಾಚರಣೆ ನಿಮಿತ್ತ ಅಂಗಾಂಗ ದಾನವನ್ನು ಉತ್ತೇಜಿಸಲು ಹೈದರಾಬಾದ್ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ವಿಜಯ್ ದೇವರಕೊಂಡ ಭಾಗವಹಿಸಿದ್ದರು. ಈ ಈವೆಂಟ್‌ನ ವಿಡಿಯೋ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ನಟ ತನ್ನ ಜೀವನದ ನಂತರ (ಮರಣದ ಬಳಿಕ) ತನ್ನ ಎಲ್ಲ ಅಂಗಗಳನ್ನು ದಾನ ಮಾಡುವ ಬಗ್ಗೆ ಮಾತನಾಡುತ್ತಿರುವುದು ಕಂಡು ಬಂದಿದೆ.
ದಾನಿಗಳಿಂದ ಮಾತ್ರ ಸಾಕಷ್ಟು ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ ಎಂದು ವೈದ್ಯರು ನನ್ನಲ್ಲಿ ಹೇಳಿದ್ದರು, ಜನರಿಗಾಗಿ ಜನರು ಭಾವನಾತ್ಮಕವಾಗಿ ದಾನ ಮಾಡುತ್ತಿದ್ದಾರೆ, ಇದು ಒಂದು ಉತ್ತಮ ವಿಷಯ. ಅದೇ ಸಮಯದಲ್ಲಿ ಅಂಗಾಂಗ ದಾನ ಕಡಿಮೆಯಾಗುತ್ತಿದೆ ಎಂಬ ಬಗ್ಗೆಯೂ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು ಎಂದು ನಟ ತಿಳಿಸಿದರು.
ಇದನ್ನೂ ಓದಿ: 50 ದಿನಗಳನ್ನು ಪೂರೈಸಿದ ಕಾಂತಾರ.. ಯಶಸ್ಸಿನ ಮಾರ್ಗದಲ್ಲಿ ಹೊಂಬಾಳೆ ಫಿಲಂಸ್
ನಾನು ನನ್ನ ಎಲ್ಲ ಅಂಗಗಳನ್ನು ದಾನ ಮಾಡುತ್ತೇನೆ. ನನ್ನ ಜೀವನದ ನಂತರ ಯಾರೊಬ್ಬರ ಭಾಗವಾಗಲು ಮತ್ತು ಅವರ ಜೀವನಕ್ಕೆ ಸಹಾಯ ಮಾಡಲು ನಾನು ಇಷ್ಟಪಡುತ್ತೇನೆ. ನನ್ನ ಅಂಗಗಳನ್ನು ವ್ಯರ್ಥ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಟ ತಿಳಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.