ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟರಾದ ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಜೋಡಿಯ 'ಖುಷಿ' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. 'ಖುಷಿ' ಗೆದ್ದ ಖುಷಿಯಲ್ಲಿ ದೇವಸ್ಥಾನಗಳ ಭೇಟಿ ಮುಂದುವರಿಸಿರುವ ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಇಂದು ವಿಶಾಖಪಟ್ಟಣಂನ ಸಿಂಹಾಚಲಂ ದೇವಸ್ಥಾನದಲ್ಲಿ ಕಾಣಿಸಿಕೊಂಡರು.
ರಿಲೀಸ್ಗೂ ಮುನ್ನ ಸಖತ್ ಸದ್ದು ಮಾಡಿದ್ದ 'ಖುಷಿ' ಸಿನಿಮಾ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖುಷಿ ಯಶಸ್ಸಿನಲ್ಲಿ ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ತೇಲುತ್ತಿದ್ದಾರೆ. ನಿನ್ನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಖುಷಿ ಸಕ್ಸಸ್ ಸೆಲೆಬ್ರೇಶನ್ ಹಮ್ಮಿಕೊಳ್ಳಲಾಗಿತ್ತು. ನಾಯಕ ನಟ ವಿಜಯ್ ದೇವರಕೊಂಡ ಸೇರಿದಂತೆ ಚಿತ್ರತಂಡ ಈ ಅದ್ಧೂರಿ ಈವೆಂಟ್ನಲ್ಲಿ ಭಾಗಿಯಾಗಿತ್ತು. ಇಂದು ವಿಶಾಖಪಟ್ಟಣಂನ ಸಿಂಹಾಚಲಂ ದೇವಸ್ಥಾನಕ್ಕೆ ವಿಜಯ್ ದೇವರಕೊಂಡ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
'ಖುಷಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯೋಗ್ಯ ಅಂಕಿ ಅಂಶ ಹೊಂದಿದೆ. ಈ ಹಿನ್ನೆಲೆ ನಟ ಸೇರಿದಂತೆ ಹಲವರು ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಇಂದು ಸಿಂಹಾಚಲಂನ ಶ್ರೀ ವರಾಹ ಲಕ್ಷ್ಮಿ ನರಸಿಂಹ ದೇವಾಲಯಕ್ಕೆ ಚಿತ್ರತಂಡ ಭೇಟಿ ಕೊಟ್ಟು ಪೂಜೆ, ಪ್ರಾರ್ಥನೆ ಸಲ್ಲಿಸಿದೆ.
ಖುಷಿ ಚಿತ್ರ ತಯಾರಕರಾದ ಮೈತ್ರಿ ಮೂವಿ ಮೇಕರ್ಸ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ X (ಹಿಂದಿನ ಟ್ವಿಟರ್) ನಲ್ಲಿ ದೇವಾಲಯ ಭೇಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ''ಖುಷಿ ಸಕ್ಸಸ್ ಸೆಲೆಬ್ರೇಶನ್ ಆದ ಬಳಿಕ ಚಿತ್ರತಂಡ ವಿಶಾಖಪಟ್ಟಣಂನ ಸಿಂಹಾಚಲಂ ಸನ್ನಿಧಿಯಲ್ಲಿ ದೇವರ ಆಶೀರ್ವಾದ ಪಡೆದಿದೆ'' ಎಂದು ಟ್ವೀಟ್ ಮಾಡಿಕೊಂಡಿದೆ.
ಇದನ್ನೂ ಓದಿ: 'ಭಾರತ್ ಮಾತಾ ಕಿ ಜೈ': ಇಂಡಿಯಾ vs ಭಾರತ್ ಚರ್ಚೆ ನಡುವೆ ಅಮಿತಾಭ್ ಬಚ್ಚನ್ ಟ್ವೀಟ್!
ಇದಕ್ಕೂ ಮುನ್ನ ಲೈಗರ್ ನಟ ವಿಜಯ್ ದೇವರಕೊಂಡ ತೆಲಂಗಾಣದ ಯಾದಾದ್ರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ತಾಯಿ ಮಾಧವಿ, ತಂದೆ ಗೋವರ್ಧನ್ ರಾವ್ ಮತ್ತು ಸಹೋದರ ಆನಂದ್ ಜೊತೆ ಯಾದಾದ್ರಿ ಸನ್ನಿಧಿಯಲ್ಲಿ ನಟ ಕಾಣಿಸಿಕೊಂಡಿದ್ದರು. ಮೈತ್ರಿ ಮೂವಿ ಮೇಕರ್ಸ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿತ್ತು. ''ಕುಟುಂಬ ಮತ್ತು ಚಿತ್ರತಂಡದೊಂದಿಗೆ ನಟ ವಿಜಯ್ ದೇವರಕೊಂಡ, ಖುಷಿ ಬ್ಲಾಕ್ಬಸ್ಟರ್ ಆದ ಬಳಿಕ ಯಾದಾದ್ರಿ ಸನ್ನಿಧಿಯಲ್ಲಿ ಆಶೀರ್ವಾದ ಪಡೆದ ಕ್ಷಣ'' ಎಂದು ಬರೆದುಕೊಂಡಿತ್ತು.
ಇದನ್ನೂ ಓದಿ: Kushi ಗೆದ್ದ ಸಂಭ್ರಮದಲ್ಲಿ ವಿಜಯ್ ದೇವರಕೊಂಡ: ಅಭಿಮಾನಿಗಳಿಗೆ 1 ಕೋಟಿ ರೂ. ದೇಣಿಗೆ
ನಿನ್ನೆ, ಸೋಮವಾರ ವಿಶಾಖಪಟ್ಟಣಂನಲ್ಲಿ 'ಖುಷಿ' ಸಕ್ಷಸ್ ಸೆಲೆಬ್ರೇಶನ್ ಈವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ನಟ ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದರು. ಫ್ಯಾನ್ಸ್ಗೆ ಸಹಾಯ ಮಾಡುವ ಹೃದಯಸ್ಪರ್ಶಿ ಘೋಷಣೆ ಕೂಡ ಮಾಡಿದರು. 100 ಅರ್ಹ ಕುಟುಂಬಗಳಿಗೆ (ಅಭಿಮಾನಿ) 1 ಲಕ್ಷ ರೂಪಾಯಿಯಂತೆ 1 ಕೋಟಿ ರೂಪಾಯಿಯನ್ನು ಮುಂದಿನ 10 ದಿನಗಳೊಳಗಾಗಿ ವಿತರಿಸುವುದಾಗಿ ತಿಳಿಸಿದರು.