ಸೈನೈಡ್ ಹಾಗೂ ಅಟ್ಟಹಾಸ ಎಂಬ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿದ ನಿರ್ದೇಶಕ ಎ.ಎಂ.ಆರ್ ರಮೇಶ್. ನೈಜ ಘಟನೆಗಳ ಸಿನಿಮಾಗಳನ್ನು ಮಾಡಿ ಸಕ್ಸಸ್ ಕಂಡಿರುವ ನಿರ್ದೇಶಕ ರಮೇಶ್ ಅವರ 'ವೀರಪ್ಪನ್ ಹಂಗರ್ ಆಫ್ ಕಿಲ್ಲಿಂಗ್' ಚಿತ್ರ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಪ್ರಕರಣದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಹಿನ್ನಡೆ ಕಂಡಿದ್ದಾರೆ.
ಈ ಮೊದಲೇ ವೀರಪ್ಪನ್ ಹಂಗರ್ ಆಫ್ ಕಿಲ್ಲಿಂಗ್ ಎಂಬ ಟೈಟಲ್ ಇಟ್ಟುಕೊಂಡು, ವೀರಪ್ಪನ್ ಕುರಿತಾಗಿ ವೆಬ್ ಸೀರಿಸ್ ಮತ್ತು ಸಿನಿಮಾ ಮಾಡಲು ನಿರ್ದೇಶಕ ರಮೇಶ್ ಸಜ್ಜಾಗಿದ್ದರು. ಕಿಶೋರ್ ಮುಖ್ಯಭೂಮಿಕೆಯಲ್ಲಿರುವ ಈ ಸೀರಿಸ್ ನಾಲ್ಕು ಭಾಷೆಯಲ್ಲಿ ಬರಲು ತಯಾರಿ ನಡೆಸಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗೆ ಈ ವೆಬ್ ಸೀರಿಸ್ ಪ್ರಸಾರ ಆಗಿ ಎರಡು ವರ್ಷ ಆಗಬೇಕಿತ್ತು. ಆದರೆ, ವೀರಪ್ಪನ್ ಬಗ್ಗೆ ವೆಬ್ ಸೀರಿಸ್ ರಿಲೀಸ್ ಮಾಡಬಾರದು ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.
ಅಷ್ಟೇ ಅಲ್ಲ, ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು ವೀರಪ್ಪನ್ ಹೆಸರು ಹೇಳಿಕೊಂಡು ಹಣ ಮಾಡುತ್ತಿದ್ದಾರೆ. ನಮಗೆ, ನಮ್ಮ ಮಕ್ಕಳ ಗೌರವಯುತ ಜೀವನಕ್ಕೆ ಇದರಿಂದ ಧಕ್ಕೆಯಾಗುತ್ತಿದೆ. ಇನ್ನೂ ರಮೇಶ್ ಅವರು ಈ ಹಿಂದೆ ಅಟ್ಟಹಾಸ ಎಂಬ ಸಿನಿಮಾ ಮಾಡಿದ್ರು. ಆಗ ತಮಿಳು ಭಾಷೆಗೆ ಎಂಟು ಕೋಟಿ ರೂಪಾಯಿಗೆ ಮಾರಾಟ ಮಾಡಿದ್ರು. ಮತ್ತೆ ವೀರಪ್ಪನ್ ಹೆಸರು ಇಟ್ಟುಕೊಂಡು ಹಣ ಮಾಡಲು ಹೊರಟ್ಟಿದ್ದಾರೆ ಅಂತಾ ಮುತ್ತುಲಕ್ಷ್ಮೀ ಅವರು ನಿರ್ದೇಶಕ ರಮೇಶ್ ವಿರುದ್ಧ ಆರೋಪ ಮಾಡಿ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು.
ಈ ಕಾನೂನು ಹೋರಾಟದಲ್ಲಿ ನಿರ್ದೇಶಕ ರಮೇಶ್ ಪರವಾಗಿ ತೀರ್ಪು ಬಂದಿದೆ. ದಿನಾಂಕ 15.11.2022ರಂದು ಸಿಟಿ ಸಿವಿಲ್ ಕೋರ್ಟ್ ಮುತ್ತುಲಕ್ಷ್ಮಿ ಅವರ ದಾವೆಯನ್ನು ವಜಾಗೊಳಿಸಿ ನಿರ್ದೇಶಕ ರಮೇಶ್ ಪರವಾಗಿ ತೀರ್ಪು ನೀಡಿದೆ.
ವೀರಪ್ಪನ್ ಹಂಗರ್ ಆಫ್ ಕಿಲ್ಲಿಂಗ್ ವೆಬ್ ಸೀರಿಸ್ ಬಿಡುಗಡೆ ಮಾಡಲು ಕೋರ್ಟ್ ತೀರ್ಪು ನೀಡಿದೆ ಎಂದು ಮಾಧ್ಯಮಗಳಿಗೆ ಇಂದು ರಮೇಶ್ ತಿಳಿಸಿದರು. ಮುಂದಿನ ವರ್ಷ ಏಪ್ರಿಲ್ನಲ್ಲಿ ವೀರಪ್ಪನ್ ಹಂಗರ್ ಆಫ್ ಕಿಲ್ಲಿಂಗ್ ಸಿನಿಮಾ ಜೊತೆಗೆ ವೆಬ್ ಸೀರಿಸ್ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದರು.
ಈ ಸೀರಿಸ್ನ ಶೇ.95ರಷ್ಟು ಚಿತ್ರೀಕರಣ ಮುಗಿಸಿದ್ದು 20 ಎಪಿಸೋಡ್ ಇರಲಿದೆ. ಪಾರ್ಟ್ 1 ಹಾಗೂ ಪಾರ್ಟ್ 2 ರೀತಿಯಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುಲಾಗುವುದು. ಈ ಚಿತ್ರ ಸಾಕಷ್ಟು ರೋಚಕ ವಿಷಯಗಳನ್ನು ಒಳಗೊಂಡಿದೆ. ವೀರಪ್ಪನ್ ಜೊತೆ ಇದ್ದ ಸಹಚರರು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಬಾಲಿವುಡ್ ನಟ ನಾನಾ ಪಾಟೇಕರ್ ಸೇರಿದಂತೆ ಕೆಲ ಬಾಲಿವುಡ್ ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಅಂತಾ ನಿರ್ದೇಶಕ ಎ.ಎಂ ರಮೇಶ್ ಹೇಳಿದರು.
ಇದನ್ನೂ ಓದಿ: ಹುಲಿಗಳಿಗೆ ಕಲ್ಲೆಸೆತ: ರವೀನಾ ಟಂಡನ್ ಟ್ವೀಟ್ ಆಧರಿಸಿ ತನಿಖೆ
ಈ ಸಿನಿಮಾ ಹಾಗೂ ವೆಬ್ ಸೀರಿಸ್ ವೀರಪ್ಪನ್ ಕಾಡುಗಳ್ಳನಾಗಿ ಬೆಳೆಯೋದಿಕ್ಕೆ ಕಾರಣ ಏನು? ಅವನು ಎಷ್ಟು ಜನ ಪೊಲೀಸ್ ಹಾಗು ಸಾಮಾನ್ಯ ಜನರನ್ನು ಕೊಲೆ ಮಾಡಿದ? ಎಂಬುದು ಸೇರಿ ಅನೇಕ ರೋಚಕ ಘಟನೆಗಳನ್ನು ಒಳಗೊಂಡಿರುತ್ತದೆ. ಕ್ರಿಮಿನಲ್ ಸೈಕಲಾಜಿಕಲ್ ವಿದ್ಯಾರ್ಥಿನಿಯಿಂದ ಕತೆ ಆರಂಭವಾಗಲಿದ್ದು, ಪಾತ್ರವನ್ನು ನಿರ್ದೇಶಕ ರಮೇಶ್ ಮಗಳು ವಿಜೇತಾ ನಿರ್ವಹಿಸಿದ್ದಾರೆ.