ಕೆಲವು ಚಿತ್ರಗಳೇ ಹಾಗೆ ಈ ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ನಿರ್ದೇಶಕನ ಪರಿಕಲ್ಪನೆಗೆ ತಕ್ಕಂತೆ ಚಿತ್ರದ ಟೈಟಲ್ ಜೊತೆಗೆ ಕಂಟೆಂಟ್ನೊಂದಿಗೆ ಸಿನಿಮಾ ಪ್ರಿಯರಲ್ಲಿ ಆ ಸಿನಿಮಾ ನೋಡಬೇಕು ಎಂಬ ಕುತೂಹಲ ಮೂಡಿಸುತ್ತೆ. ಸದ್ಯ ಕನ್ನಡ ಚಿತ್ರರಂಗ ಅದ್ಧೂರಿ ಮೇಕಿಂಗ್ ಹಾಗು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಕನ್ನಡ ಚಿತ್ರರಂಗ ವಿಶ್ವವೇ ತಿರುಗಿ ನೋಡುವಂತೆ ಮಾಡುತ್ತಿದೆ. ಈ ಸಾಲಿನಲ್ಲಿ ಇದೀಗ ರೋಮಿಯೋ ಸಿನಿಮಾ ಖ್ಯಾತಿಯ ಪಿ.ಸಿ ಶೇಖರ್ ನಿರ್ದೇಶನದ BAD ಚಿತ್ರ ಹಲವು ವಿಚಾರಗಳಿಗೆ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುತ್ತಿದೆ. ಟೈಟಲ್ನಿಂದಲೇ ಕನ್ನಡ ಚಿತ್ರರಂಗದ ಟಾಕ್ ಆಗುತ್ತಿರುವ BAD ಚಿತ್ರದ ಟ್ರೈಲರ್ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ.
ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ BAD ಈ ಚಿತ್ರದ ಟ್ರೇಲರ್ನಲ್ಲಿ ಏನೆಲ್ಲಾ ಇರಬಹುದು? ಎಂಬದನ್ನು ತಿಳಿಸಲು ಚಿತ್ರತಂಡ ಪ್ರೋಮೋ ಬಿಡುಗಡೆ ಮಾಡಿದೆ. ಈ ಪ್ರೋಮೊದಲ್ಲಿ ನಿರ್ದೇಶಕರಾದ ಪಿ.ಸಿ. ಶೇಖರ್ ಹಾಗೂ ನಾಯಕರಾದ ನಕುಲ್ ಗೌಡ ಸುಂದರವಾದ ನಿರೂಪಣೆಯಲ್ಲಿ "BAD" ಚಿತ್ರದ ಟ್ರೇಲರ್ನ ವೈಶಿಷ್ಟ್ಯತೆ ಹಾಗು ತಾಂತ್ರಿಕ ವಿಭಿನ್ನತೆಯ ಮಾಹಿತಿ ನೀಡಿದ್ದಾರೆ. ಈ ಪ್ರೋಮೋ ನೋಡಿದ ಮೇಲೆ ಚಿತ್ರದ ಬಗ್ಗೆ ಹಾಗೂ ಬಿಡುಗಡೆಯಾಗಲಿರುವ ಟ್ರೇಲರ್ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ. ಹೀಗೆ ಪಾತ್ರಗಳಿಂದ ಕೌತುಕ ಮೂಡಿಸಿರೋ BAD ಚಿತ್ರದ ಟ್ರೇಲರ್ ಜನವರಿ 12 ರಂದು ಜೆಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಪ್ರೀತಿಯ ರಾಯಭಾರಿ ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ "BAD" ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಲವ್ ಬರ್ಡ್ಸ್ ಚಿತ್ರದ ಬಳಿಕ ನಿರ್ದೇಶಕ ಪಿ.ಸಿ ಶೇಖರ್ ನಿರ್ದೇಶನ ಮಾಡುತ್ತಿರೋ ಚಿತ್ರವನ್ನು ಎಸ್.ಆರ್. ವೆಂಕಟೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ "BAD" ಚಿತ್ರಕ್ಕಿದೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ BAD ಚಿತ್ರದ ಟ್ರೈಲರ್ ಹೇಗಿರಲಿದೆ ಅನ್ನೋದು ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: 'ಜೂನಿ' ಕ್ಯಾರೆಕ್ಟರ್ ಟೀಸರ್ ಅನಾವರಣ; ಚೆಫ್ ಆದ ಪೃಥ್ವಿ ಅಂಬಾರ್