ಪೋಸ್ಟರ್ ಹಾಗು ಹಾಡುಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾ 'ತೋತಾಪುರಿ 2'. ನವರಸ ನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ ಚಿತ್ರವಿದು. ತೋತಾಪುರಿ 2 ಬಿಡುಗಡೆಗೆ ಸಜ್ಜಾಗಿದೆ.
ತೋತಾಪುರಿ 1 ರಲ್ಲಿ ಜಾತಿ-ಧರ್ಮ ಹಾಗೂ ಮಡಿವಂತಿಕೆ ಬಗ್ಗೆ ಕಾಮಿಡಿ ಮೂಲಕ ಹೇಳಲಾಗಿತ್ತು. ಇದೀಗ ತೋತಾಪುರಿ 2 ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಕೆಲ ದೃಶ್ಯಗಳನ್ನು ರೀ ಶೂಟ್ ಮಾಡಲಾಗಿದೆ. ಡಾಲಿ ಧನಂಜಯ್ ವಿಭಿನ್ನ ಪಾತ್ರದ ಮೂಲಕ ಸಿನಿ ಪ್ರೇಮಿಗಳ ಮನಗೆಲ್ಲಲು ರೆಡಿಯಾಗಿದ್ದಾರೆ. ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು. ಆದರೆ ಈ ಭಾಗದಲ್ಲಿ ಅವರು ಎಷ್ಟು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಗೆಟಪ್, ಡೈಲಾಗ್ ಸೇರಿದಂತೆ ಯಾವುದೇ ವಿಷಯದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ಹೊರ ಹಾಕಿರಲಿಲ್ಲ. ಇದೀಗ ಸಿನಿಮಾದ ಎರಡನೇ ಭಾಗ ಬಿಡುಗಡೆ ಹಂತಕ್ಕೆ ಬಂದಿದೆ. ಹೀಗಾಗಿ ಅವರ ಪಾತ್ರದ ಬಗ್ಗೆ ಚಿತ್ರತಂಡದವರು ಕಲರ್ಫುಲ್ ಮೇಕಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಾರಾಯಣ್ ಪಿಳ್ಳೈ ಎಂಬ ಪಾತ್ರ ನಿರ್ವಹಿಸುತ್ತಿರುವ ಡಾಲಿ, ಈ ಚಿತ್ರದಲ್ಲಿ ಶ್ರೀಮಂತ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಉದ್ಯಮಿಯ ಲೈಫ್‌ಸ್ಟೈಲ್, ಲವ್‌ಸ್ಟೋರಿ ಸೇರಿದಂತೆ ಇನ್ನಿತರೆ ವಿಷಯಗಳನ್ನು ತೋತಾಪುರಿ 2ರಲ್ಲಿ ತೆರೆದಿಡುವ ಪ್ರಯತ್ನವಾಗಿದೆಯಂತೆ. ಬಹುಭಾಷಾ ಸುಂದರಿ ಸುಮನ್ ರಂಗನಾಥ್ ಜೊತೆ ಕಾಂಟೆಸಾ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವ ದೃಶ್ಯ ಮೇಕಿಂಗ್ ವಿಡಿಯೋದಲ್ಲಿ ಕಾಣಸಿಗುತ್ತದೆ. ಸುಮನ್ ರಂಗನಾಥ್ ಅವರು ಕಾರ್ ಡ್ರೈವ್ ಮಾಡಿದ್ರೆ ಪಕ್ಕದಲ್ಲಿ ಧನಂಜಯ್ ಸಖತ್ ಎಂಜಾಯ್ ಮಾಡಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಜೈಲರ್ ವೀಕ್ಷಿಸಿದ ಅಳಿಯ ಧನುಷ್: ಚೆನ್ನೈಗೆ ಬಂದ ಜಪಾನ್ ಜೋಡಿ!
ಈ ಚಿತ್ರದಲ್ಲಿ ಡಾಲಿ ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಣಿಸಿಕೊಂಡಿರದ ಸ್ಟೈಲ್ನಲ್ಲಿ ತೋತಾಪುರಿ 2ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾತಿನ ಶೈಲಿಯಲ್ಲೂ ಬದಲಾವಣೆ ಕಾಣಬಹುದು. ಸಿನಿಮಾ ಬಿಡುಗಡೆಗೂ ಮುನ್ನ ಡಾಲಿ ಗೆಟಪ್ ಹರಿಬಿಟ್ಟಿರುವ ಚಿತ್ರತಂಡ, ಸಿನಿಮಾ ಮೇಲೆ ನೀರಿಕ್ಷೆ ಹೆಚ್ಚಾಗುವಂತೆ ಮಾಡಿದೆ. ಮೈಸೂರು, ಕೂರ್ಗ್, ಕೇರಳ ಸೇರಿದಂತೆ ರಮಣೀಯ ಸ್ಥಳಗಳಲ್ಲಿ ಡಾಲಿ-ಸುಮನ್ ರಂಗನಾಥ್ ಅಭಿನಯಿಸಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಇದನ್ನೂ ಓದಿ: ರಾಣಿಯಂತೆ ರೆಡಿಯಾದ ರಾಗಿಣಿ! ಝೀರೋ ಫಿಗರ್ ಫೋಟೋಶೂಟ್ ನೋಡಿದ್ರಾ!
ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ ಅಂತಹ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರೋ ನಿರ್ಮಾಪಕ ಕೆ ಎ ಸುರೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಜಯಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಹಾಡುಗಳು ಮತ್ತು ಮೇಕಿಂಗ್ ವಿಡಿಯೋದಿಂದ ಟಾಕ್ ಆಗುತ್ತಿರುವ ತೋತಾಪುರಿ 2 ಇದೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.