ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ 2023ರ ಬಹುನಿರೀಕ್ಷಿರ ಚಿತ್ರ 'ಟೈಗರ್ 3' ದೀಪಾವಳಿ ಸಂದರ್ಭ ತೆರೆಕಂಡು, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಭಾರತದ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಬಾಲಿವುಡ್ ಬಹುಬೇಡಿಕೆ ತಾರೆಯರಾದ ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ಅಭಿನಯದ ಟೈಗರ್ 3ರ ಬಾಕ್ಸ್ ಆಫೀಸ್ ಪ್ರಯಾಣ ಅತ್ಯುತ್ತಮವಾಗಿದೆ. ಮನೀಶ್ ಶರ್ಮಾ ನಿರ್ದೇಶನದ ಸ್ಪೈ-ಥ್ರಿಲ್ಲರ್ ಸಿನಿಮಾ ಎರಡನೇ ದಿನವೇ ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಗಡಿ ದಾಟಿತ್ತು. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಮೂರನೇ ದಿನ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 42.50 ಕೋಟಿ ರೂ. ಸಂಗ್ರಹಿಸಿದೆ.
ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲ್ಲು ಕ್ಯಾಟ್ ಮತ್ತೊಮ್ಮೆ ಸ್ಕ್ರೀನ್ ಶೇರ್ ಮಾಡಿರುವ ಟೈಗರ್ 3ರ ಮೂರನೇ ದಿನ ಸುಮಾರು 42.50 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ಎರಡು ದಿನಗಳ ಅಂಕಿಅಂಶಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಇದೆ. ಚಿತ್ರ ತೆರೆಕಂಡ ಮೊದಲನೇ ದಿನ (ಭಾನುವಾರ) 44.5 ಕೋಟಿ ರೂ. ಗಳಿಸಿತ್ತು. ಎರಡನೇ ದಿನ (ಸೋಮವಾರ) ಸುಮಾರು 58 ಕೋಟಿ ರೂ. ಚಿಲ್ಲರೆ ಕಲೆಕ್ಷನ್ ಮಾಡಿತ್ತು. ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡಿದ್ದ ಸಿನಿಮಾ ಕೇವಲ ಎರಡು ದಿನಗಳಲ್ಲಿ 100 ಕೋಟಿ ರೂ. ಗಡಿ ದಾಟಿತ್ತು. 3ನೇ ದಿನ (ಮಂಗಳವಾರ) 42.50 ಕೋಟಿ ರೂ. ಸಂಗ್ರಹಿಸುವ ಮೂಲಕ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಈವರೆಗೆ ಒಟ್ಟಾರೆ ಗಳಿಕೆ 146 ಕೋಟಿ ರೂ.ಗೆ ಏರಿದೆ.
ಟೈಗರ್ 3 ಕಲೆಕ್ಷನ್ನ ಅಂಕಿ-ಅಂಶಗಳು ಉತ್ತಮವಾಗಿವೆ. ಮಂಗಳವಾರದಂದು ಚಿತ್ರಮಂದಿರಗಳಲ್ಲಿ ಟೈಗರ್ 3ರ ಒಟ್ಟಾರೆ ಹಿಂದಿ ಆಕ್ಯುಪೆನ್ಸಿ ಶೇ. 30.93 ರಷ್ಟಿತ್ತು. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಸಲ್ಮಾನ್ ಖಾನ್ ಅವರ ಟೈಗರ್ 3 ಎರಡು ಹೊಸ ದಾಖಲೆಗಳನ್ನು ಸಾಧಿಸಿದೆ. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಮೂರೇ ದಿನದಲ್ಲಿ ಟೈಗರ್ 3ರ ದೇಶಿಯ ಗಲ್ಲಾಪೆಟ್ಟಿಗೆ ಗಳಿಕೆ 146 ಕೋಟಿ ರೂಪಾಯಿ. 100 ಕೋಟಿ ರೂ. ದಾಟಿದ ಸಲ್ಮಾನ್ ಖಾನ್ ಅವರ 17ನೇ ಚಿತ್ರವಿದು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್ ಸೆಮಿ ಫೈನಲ್ ವೀಕ್ಷಿಸಲಿರುವ ರಜಿನಿಕಾಂತ್
ಇನ್ನೂ ಟೈಗರ್ 3 ಸಿನಿಮಾ ಜಾಗತಿಕವಾಗಿ 220 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ದಶಕದ ಹಿಂದೆ ತೆರೆಕಂಡ ಏಕ್ ಥಾ ಟೈಗರ್ ಸಿನಿಮಾ ವಿಶ್ವದಾದ್ಯಂತ 330 ಕೋಟಿ ರೂ. ಗಳಿಸಿತ್ತು. ಟೈಗರ್ 3 ಈ ದಾಖಲೆಯನ್ನು ಪುಡಿಗಟ್ಟುವ ವಿಶ್ವಾಸದಲ್ಲಿ ಚಿತ್ರತಂಡವಿದೆ. 2017ರ ಟೈಗರ್ ಜಿಂದಾ ಹೈ ಸಿನಿಮಾ 565 ಕೋಟಿ ರೂ. ಸಂಗ್ರಹಿಸಿದೆ. 2017ರ ಟೈಗರ್ ಜಿಂದಾ ಹೈ ಚಿತ್ರದ ಮುಂದುವರಿದ ಭಾಗವೇ ಟೈಗರ್ 3. ಈ ಚಿತ್ರ ಯಶ್ ರಾಜ್ ಫಿಲ್ಮ್ಸ್ನ ಸ್ಪೈ ಯೂನಿವರ್ಸ್‌ನ ಒಂದು ಭಾಗ. ಜೋಯಾ ಪಾತ್ರದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಇಮ್ರಾನ್ ಹಶ್ಮಿ ಅವರು ಸಲ್ಮಾನ್ ಎದುರಾಳಿಯಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಸಲ್ಮಾನ್ ಖಾನ್ ಚಿತ್ರದ ಕೇಂದ್ರಬಿಂದು. ಅವರು ದೇಶ ರಕ್ಷಿಸುವ 'ಟೈಗರ್' ಪಾತ್ರ ನಿರ್ವಹಿಸಿದ್ದಾರೆ.