ಶುಕ್ರವಾರ ಬಂತೆಂದರೆ ಸಾಕು, ಸಿನಿ ಪ್ರೇಮಿಗಳಿಗೆ ಹಬ್ಬವೇ ಸರಿ. ಅನೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿರುತ್ತದೆ. ಇದೀಗ ನವೆಂಬರ್ 17 ಅಂದರೆ ನಾಳೆ ಬಹುಭಾಷೆಯ ಸಿನಿಮಾಗಳು ತೆರೆ ಕಾಣಲು ಸಜ್ಜಾಗಿದೆ. ಅವುಗಳಲ್ಲಿ ಕನ್ನಡದ ಚಿತ್ರಗಳೆಂದರೆ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಮಂಗಳವಾರಂ ಹಾಗೂ ದಿ ವೆಕೆಂಟ್ ಹೌಸ್. ನಾಳೆ ಬೆಳಗ್ಗೆಯಿಂದಲೇ ಈ ಚಿತ್ರಗಳು ಥಿಯೇಟರ್ಗಳಿಗೆ ಅಪ್ಪಳಿಸಲಿದೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ'. ಮೊದಲ ಭಾಗ ಅಂದರೆ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಇತ್ತೀಚೆಗಷ್ಟೇ ತೆರೆಕಂಡು ಸೂಪರ್ ಹಿಟ್ ಆಗಿದೆ. ಪ್ರೇಕ್ಷಕರನ್ನು ಪ್ರೇಮ ಪ್ರಪಂಚಕ್ಕೆ ಕೊಂಡೊಯ್ದ ಸಿನಿಮಾ ಇದು. 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಇದೀಗ ಕ್ಷಣಗಣನೆ ಪ್ರಾರಂಭಗೊಂಡಿದೆ.
ಹೇಮಂತ್ ಎಂ ರಾವ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಮ್ಮೆ ಪ್ರೇಮಪ್ರಪಂಚಕ್ಕೆ ಭೇಟಿ ಕೊಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಸೀಕ್ವೆಲ್ ರಿಲೀಸ್ ಆಗುತ್ತಿರುವ ಸಿನಿಮಾ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.
ದಿ ವೆಕೆಂಟ್ ಹೌಸ್: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗ್ಲಾಮರ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ನಟಿ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವುದು ಗೊತ್ತೇ ಇದೆ. ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಬ್ಯೂಟಿ, 'ದಿ ವೆಕೆಂಟ್ ಹೌಸ್' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿ ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
'ದಿ ವೆಕೆಂಟ್ ಹೌಸ್' ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ. 'ದಿ ವೆಕೆಂಟ್ ಹೌಸ್' ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧಾರಿತ ಸಿನಿಮಾವಿದು.
ಮಂಗಳವಾರಂ: ಇದು ತೆಲುಗು ಸಿನಿಮಾ. ಆದರೆ ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಾಳೆ ತೆರೆ ಕಾಣುತ್ತಿದೆ. ಅಜಯ್ ಭೂಪತಿ ನಿರ್ದೇಶನದ 'ಮಂಗಳವಾರಂ' ರಸ್ಟ್ರಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪಾಯಲ್ ರಜಪೂತ್, ಶ್ರೀತೇಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇದರ ಜೊತೆಗೆ ಚೈತನ್ಯ ಕೃಷ್ಣ, ಅಜಯ್ ಘೋಷ್, ಲಕ್ಷ್ಮಣ್ ಸೇರಿದಂತೆ ಹಲವಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ದಶರಥಿ ಶಿವೇಂದ್ರ ಅವರ ಛಾಯಾಗ್ರಹಣ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸಾಯಿಕುಮಾರ್ ಯಡವಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 'ಕಾಂತಾರ' ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ಪೈಪೋಟಿ; ಕತ್ರಿನಾ, ವಿಜಯ್ ಸೇತುಪತಿ ಅಭಿನಯದ 'ಮೇರಿ ಕ್ರಿಸ್ಮಸ್' ಮುಂದೂಡಿಕೆ