2023ರ ಬಹು ನಿರೀಕ್ಷಿತ ಚಿತ್ರಗಳ ಪೈಕಿ 'ದಿ ವ್ಯಾಕ್ಸಿನ್ ವಾರ್' ಕೂಡ ಒಂದು. ನಿನ್ನೆ ದೇಶಾದ್ಯಂತ ಹಲವು ಸಿನಿಮಾಗಳು ತೆರೆಕಂಡಿದ್ದು, 'ದಿ ವ್ಯಾಕ್ಸಿನ್ ವಾರ್' ಕೂಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ. ಕೋವಿಡ್-19 ವಿರುದ್ಧದ ಹೋರಾಟದ ಕಥೆಯನ್ನಾಧರಿಸಿದ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹೆಚ್ಚೇನು ಸದ್ದು ಮಾಡಿಲ್ಲ.
- " class="align-text-top noRightClick twitterSection" data="">
ಬಾಕ್ಸ್ ಆಫೀಸ್ ಪೈಪೋಟಿ: ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಅಂಕಿ - ಅಂಶದೊಂದಿಗೆ ಆರಂಭವಾಗಿದೆ. ಪಾಸಿಟಿವ್ ರೆಸ್ಪಾನ್ಸ್ ಸ್ವೀಕರಿಸಿದ್ದರೂ, ಸಿನಿಮಾ ಗಳಿಕೆಯ ಅಂಕಿ ಅಂಶ ನೋಡಿದರೆ ಕಲೆಕ್ಷನ್ ಸಾಧಾರಣವಾಗಿದೆ ಎಂದು ತಿಳಿದು ಬಂದಿದೆ. ಬಹು ನಿರೀಕ್ಷಿತ ಚಂದ್ರಮುಖಿ 2, ಫುಕ್ರೆ 3 ಸೇರಿದಂತೆ ಕೆಲ ಸಿನಿಮಾಗಳು ನಿನ್ನೆಯೇ ಚಿತ್ರಮಂದಿರಗಳಲ್ಲಿ ತೆರೆಕಂಡ ಹಿನ್ನೆಲೆ ಬಾಕ್ಸ್ ಆಫೀಸ್ ಪೈಪೋಟಿ ಏರ್ಪಟ್ಟಿದೆ.
ದಿ ವ್ಯಾಕ್ಸಿನ್ ವಾರ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರಮಂದಿರಗಳಲ್ಲಿ ನಿನ್ನೆ ಬಿಡುಗಡೆ ಆಗಿರುವ ದಿ ವ್ಯಾಕ್ಸಿನ್ ವಾರ್ ಸಿನಿಮಾ ಮೊದಲ ದಿನ 1.3 ಕೋಟಿ ರೂ. ಗಳಿಸಿದೆ. ಫುಕ್ರೆ 3 ಮತ್ತು ಚಂದ್ರಮುಖಿ 2ರೊಂದಿಗೆ ದಿ ವ್ಯಾಕ್ಸಿನ್ ವಾರ್ ಪೈಪೋಟಿ ನಡೆಸಿದೆ. ಗುರುವಾರ ಹಿಂದಿ ಆವೃತ್ತಿಯ ಆಕ್ಯುಪೆನ್ಸಿ ರೇಟ್ ಶೇ.10.17 ರಷ್ಟಿತ್ತು. ದಿ ವ್ಯಾಕ್ಸಿನ್ ವಾರ್ ಸಿನಿಮಾವನ್ನು 10 ಕೋಟಿ ರೂಪಾಯಿ (ಅಂದಾಜು) ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
'ದಿ ವ್ಯಾಕ್ಸಿನ್ ವಾರ್' ಸಿನಿಮಾ ಕಥೆಯು, ಕೋವಿಡ್ 19 ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಸಿಕೆಯ ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ಎದುರಿಸಿದ ಸವಾಲುಗಳ ಮೇಲೆ ಕೇಂದ್ರೀಕೃತವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಿದ ಎಲ್ಲ ಕಾರ್ಯಕರ್ತರಿಗೆ ಗೌರವ ಸಲ್ಲಿಸುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಅನುಪಮ್ ಖೇರ್, ಗಿರಿಜಾ ಓಕ್, ನಿವೇದಿತಾ ಭಟ್ಟಾಚಾರ್ಯ, ಸಪ್ತಮಿ ಗೌಡ, ಮೋಹನ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಹುನಿರೀಕ್ಷಿತ 'ಸಲಾರ್' ರಿಲೀಸ್ ಡೇಟ್ ಅನೌನ್ಸ್: ಶಾರುಖ್ ಸಿನಿಮಾದೊಂದಿಗೆ ಪೈಪೋಟಿ!
ಈ ಹಿಂದೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾ ಬಗ್ಗೆ ಚರ್ಚೆ ನಡೆಸುವಾಗ, ಭಾರತದ ಸಾಧನೆಗಳು, ಸ್ವಾವಲಂಬನೆ ಮತ್ತು ವಿಜ್ಞಾನದಲ್ಲಿ ಭಾರತದ ನಾಯಕತ್ವದ ಕುರಿತು ಮಾತನಾಡಿದ್ದರು. ಅಭಿವೃದ್ಧಿ ವಿಷಯದಲ್ಲಿ ಭಾರತದ ಪಾತ್ರದ ಕುರಿತಾಗಿ ಒತ್ತಿ ಹೇಳಿದ್ದರು. ಭಾರತಕ್ಕೆ ಬೆದರಿಕೆ ಹಾಕುವವರ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ ಎಂದು ಸುಳಿವು ನೀಡಿದ್ದರು. ಭಾರತದ ನಿಜವಾದ ಶತ್ರುಗಳು ಯಾರು?, ಭಾರತವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವವರು ಯಾರು? ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದರೆ, ನಿಮಗೆ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಉತ್ತರ ಸಿಗುತ್ತದೆ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಕಂಗನಾ ರಣಾವತ್ - ರಾಘವ ಲಾರೆನ್ಸ್ ಮುಖ್ಯಭೂಮಿಕೆಯ 'ಚಂದ್ರಮುಖಿ 2' ಗಳಿಸಿದ್ದಿಷ್ಟು!
ಕೋವಿಡ್ 19 ಎಂಬ ಸೋಂಕು ಇಡೀ ವಿಶ್ವವನ್ನೇ ಆವರಿಸಿದ್ದ ವೇಳೆ ದೇಶೀಯ ಲಸಿಕೆ ತಯಾರಿಸಿದ ವಿಜ್ಞಾನಿಗಳು ಮತ್ತು ಅವರು ಎದುರಿಸಿದ ಸವಾಲುಗಳು ಸೇರಿದಂತೆ ಮುಂಚೂಣಿ ಕಾರ್ಯಕರ್ತರ ಸೇವೆ ಮೇಲೆ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಬೆಳಕು ಚೆಲ್ಲಿದೆ.